ಅನ್ನಭಾಗ್ಯ | ರಾಜ್ಯದ ರೈತರಿಂದಲೆ ಭತ್ತ, ರಾಗಿ, ಜೋಳ ಖರೀದಿಸಿ: ಕುರುಬೂರು ಶಾಂತಕುಮಾರ್ ಆಗ್ರಹ

ಬೆಂಗಳೂರು, ಜೂ.15: ರಾಜ್ಯದ ಜನರ ತೆರಿಗೆ ಹಣವನ್ನು ಕೇಂದ್ರ ಸರಕಾರಕ್ಕೆ ಕೊಡುವ ಬದಲು ರಾಜ್ಯದ ರೈತರಿಂದಲೆ ನೇರವಾಗಿ ಭತ್ತ, ರಾಗಿ, ಜೋಳ ಖರೀದಿ ಮಾಡಿ ಅದನ್ನು ಬಡವರಿಗೆ ಅನ್ನಭಾಗ್ಯ ಯೋಜನೆಯಲ್ಲಿ ವಿತರಿಸುವಂತೆ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.
ಗುರುವಾರ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಅವರು, ಇದರಿಂದಾಗಿ ಖಂಡಿತವಾಗಿಯೂ ರಾಜ್ಯದ ರೈತರಿಗೂ ಅನುಕೂಲವಾಗುತ್ತದೆ. ಬಡವರಿಗೂ ಅನುಕೂಲವಾಗುತ್ತದೆ. ಈ ದಿಕ್ಕಿನಲ್ಲಿ ತಾವು ಚಿಂತನೆ ನಡೆಸುವುದು ಬಹಳ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
ಬಡವರಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಯೋಜನೆ ಮಾಡಿದ್ದೀರಿ. ಅದರ ಉತ್ಪಾದನೆಗೆ ತಗಲುವ ವೆಚ್ಚ ಎಷ್ಟು ? ಸರಕಾರದಿಂದ ಆಗುವ ಖರ್ಚು ಎಷ್ಟು? ಲೆಕ್ಕ ಹಾಕಬೇಕು. ಅದರ ಬದಲು ಸಣ್ಣ ಮಟ್ಟದ ಒಂದು ಕೆವಿ ಸಾಮಥ್ರ್ಯದ ಸೋಲಾರ್ ವಿದ್ಯುತ್ ಯೋಜನೆಯನ್ನು ಪ್ರತಿ ಮನೆಗೆ ಕಲ್ಪಿಸಿದರೆ ಶಾಶ್ವತವಾದ ಯೋಜನೆಯಾಗುತ್ತದೆ. ಇದರಿಂದ ಪರಿಸರ ಸಂರಕ್ಷಣೆಯಾಗುತ್ತದೆ. ಸರಕಾರಕ್ಕೂ ಪ್ರತಿ ವರ್ಷ ಹೊರೆಯಾಗುವುದು ಕಡಿಮೆಯಾಗುತ್ತದೆ. ಈ ಬಗ್ಗೆಯು ತಾವು ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಅವರು ತಿಳಿಸಿದ್ದಾರೆ.








