ಮೇಕೆದಾಟು ಪಾದಯಾತ್ರೆ ವೇಳೆ ಕೋವಿಡ್ ನಿಯಮ ಉಲ್ಲಂಘನೆ ಆರೋಪ; ಡಿಕೆಶಿ ವಿರುದ್ಧದ ಎಲ್ಲ ಕೇಸ್ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆ ಜಾರಿಗೆ ಒತ್ತಾಯಿಸಿ 2022ರ ಜನವರಿಯಲ್ಲಿ ನಡೆದ ಪಾದಯಾತ್ರೆಯ ವೇಳೆ ಕೊರೋನ-19 ನಿಯಮಗಳ ಉಲ್ಲಂಘನೆ ಮತ್ತು ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಉಪಮಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ನಿಯಮ ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ ಮಾಡಿದ ಆರೋಪಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ರದ್ದುಪಡಿಸಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಇಂದು (ಜೂನ್ 16) ಆದೇಶ ಹೊರಡಿಸಿದೆ.
ಇದರಿಂದ ಡಿಸಿಎಂ ಡಿಕೆ ಶಿವಕುಮಾರ್ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಕಳೆದ ಶುಕ್ರವಾರ, ಹೈಕೋರ್ಟ್ ಶಿವಕುಮಾರ್ ಅವರ ವಿರುದ್ಧದ ಒಂದು ಪ್ರಕರಣವನ್ನು ರದ್ದುಗೊಳಿಸಿತು. ಶಿವಕುಮಾರ್ ವಿರುದ್ಧ ಕನಕಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳಿಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ತಡೆ ನೀಡಿದ್ದರು.
ಶಿವಕುಮಾರ್ ಅವರು ಪಾದಯಾತ್ರೆ ವೇಳೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ರದ್ದುಪಡಿಸುವಂತೆ ಹಾಗೂ ತಡೆ ಕೋರಿ ಹಲವು ಅರ್ಜಿಗಳನ್ನು ಸಲ್ಲಿಸಿದ್ದರು.





