ಮೀನುಗಾರರ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ವಿಳಂಬವಾದಲ್ಲಿ ಅಧಿಕಾರಿಗಳೇ ಹೊಣೆ: ಮಂಕಾಳ ಎಸ್. ವೈದ್ಯ ಎಚ್ಚರಿಕೆ

ಮಂಗಳೂರು, ಜೂ.16: ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಅಪಘಾತ ಸಂಭವಿಸಿ ತೊಂದರೆಗೀಡಾದಾಗ ಸಂತ್ರಸ್ತರಿಗೆ ಅಥವಾ ಅವರ ಕುಟುಂಬದವರಿಗೆ ಪರಿಹಾರ ನೀಡುವಲ್ಲಿ ವಿಳಂಬವಾಗಬಾರದು. ವಿಳಂಬವಾದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಕಡಲ್ಕೊರೆತ ಸೇರಿದಂತೆ ಬಂದರು, ಮೀನುಗಾರಿಕೆ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಇನ್ನು ಮುಂದೆ ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಅಪಘಾತಕ್ಕೀಡಾದ ಸಂತ್ರಸ್ತರಿಗೆ ಕನಿಷ್ಠ ಒಂದು ತಿಂಗಳ ಒಳಗೆ ಪರಿಹಾರ ನೀಡಲು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಅವಘಡಗಳಿಗೆ ಈಡಾದ ಸಂತ್ರಸ್ತರಿಗೆ ಹಾಗೂ ನಿಧನರಾದ ಸುಮಾರು 20 ಮೀನುಗಾರರ ಕುಟುಂಬಗಳಿಗೆ ಒಂದು ವರ್ಷವಾದರೂ ಪರಿಹಾರ ನೀಡದಿರುವ ಪ್ರಕರಣ ಸಭೆಯಲ್ಲಿ ಗಮನಕ್ಕೆ ಬಂದಾಗ ಸಚಿವ ಮಂಕಾಳ ವೈದ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಶೀಘ್ರ ವಾಗಿ ಪರಿಹಾರ ದೊರಕಿಸಿ ಕೊಡಲು ಸೂಕ್ತ ಕ್ರಮ ಕೈ ಗೊಳ್ಳಬೇಕು ಎಂದರು.
ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆಯ ಮೂಲಕ ಸಾಮೂಹಿಕ ವಿಮಾ ಯೋಜನೆಯ ಸೌಲಭ್ಯ ಗಳು ಮೂರು ತಿಂಗಳ ಒಳಗೆ ಮೀನುಗಾರರಿಗೆ ದೊರೆಯದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡದ ಸುಮಾರು 20 ಮೀನುಗಾರರ ಸಂತ್ರಸ್ತರ ಕುಟುಂಬಗಳಿಗೆ ಬಾಕಿ ಇರುವ ರೂ.1.60 ಕೋಟಿ ಪರಿಹಾರವನ್ನು ರಾಜ್ಯ ಸರಕಾರದಿಂದ ನೀಡಲು ಕ್ರಮ ಕೈಗೊಳ್ಳಲಾಗುವುದು. ಅದೇರೀತಿ ಕೇಂದ್ರ ಸರಕಾದಿಂದಲೂ ಮೀನುಗಾರ ಸಂತ್ರಸ್ತರ ಕುಟುಂಬಗಳಿಗೆ ಬರಬೇಕಾದ ಪರಿಹಾರದ ಮೊತ್ತ ವನ್ನು ಪಾವತಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.
ಕಡಲ್ಕೊರೆತ ಇರುವ ಪ್ರದೇಶದಲ್ಲಿ ತುರ್ತು ಕಾಮಗಾರಿ ಹಾಗೂ ತುರ್ತು ಪರಿಹಾರ ಕ್ರಮ ಕೈಗೊಳ್ಳಲು ಸಚಿವರು ಸೂಚನೆ ನೀಡಿದ್ದಾರೆ.
ಈ ಬಾರಿ ಮೀನುಗಾರರಿಗೆ ಡೀಸೆಲ್ ಸಬ್ಸಿಡಿ, ಸೀಮೆಎಣ್ಣೆ ದೊರಕಿಸಿಕೊಡಲು ಮುಂಚಿ ತವಾಗಿ ಸಿದ್ದರಾಗಿರುವಂತೆ ಸಚಿವರು ಹಾಗೂ ಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಭೆಯ ದ.ಕ. ಜಿಲ್ಲಾಧಿಕಾರಿ ರವಿಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್ ಮತ್ತು ಬಂದರು, ಮೀನುಗಾರಿಕೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.