ಯಡಿಯೂರಪ್ಪ ಬಳಿಕ ಅಧಿಕಾರಕ್ಕೆ ಬಂದವರು ಮಾಡಿದ್ದೇನು?: ಬೊಮ್ಮಾಯಿ ವಿರುದ್ಧ ಪ್ರತಾಪ್ ಸಿಂಹ ಪರೋಕ್ಷ ವಾಗ್ದಾಳಿ
''ಪ್ರವೀಣ್ ನೆಟ್ಟಾರು, ಹರ್ಷ ಕೊಲೆಯಾದಾಗ ಸೂಕ್ತ ಕ್ರಮ ಕೈಗೊಳ್ಳಲಿಲ್ಲ''

ಮೈಸೂರು: ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ಇದೆ ಎಂದು ಆರೋಪಿಸಿದ್ದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮತ್ತೆ ಸ್ವಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಯಡಿಯೂರಪ್ಪ ಬಳಿಕ ಅಧಿಕಾರಕ್ಕೆ ಬಂದ ಅತಿರಥ ಮಹಾರಥರು ಮಾಡಿದ್ದೇನು?' ಎಂದು ಅಸಮಾಧಾನ ವ್ಯಕ್ತಪಡಿಸಿದರು.
''2018ರಲ್ಲಿ ನಮ್ಮ ಪಕ್ಷ 104 ಸೀಟ್ ಗೆದ್ದಾಗ, ಇನ್ನೂ 9 ಸೀಟ್ ಗೆದ್ದಿದ್ದರೆ ನಮ್ಮದೇ ಸರಕಾರ ಬರ್ತಾ ಇತ್ತು ಅಂತ ನಮ್ಮ ಕಾರ್ಯಕರ್ತರಿಗೆ ನೋವಾಯಿತು. ಆದರೆ ಆ ಬಳಿಕ ಯಡಿಯೂರಪ್ಪನವರು ತುಂಬಾ ಪ್ರಯತ್ನ ಮಾಡಿ ಸರ್ಕಾರ ತಂದರು. ಯಡಿಯೂರಪ್ಪ ಸಿಎಂ ಆದ ಕೂಡಲೇ ಪ್ರವಾಹ ಬಂದಿತ್ತು. ಕ್ಯಾಬಿನೆಟ್ ರಚನೆ ಆಗದಿದ್ದರೂ, ಬಿ.ಎಸ್.ಯಡಿಯೂರಪ್ಪ ಒಬ್ಬರೇ ಪ್ರವಾಹ ಪರಿಸ್ಥಿತಿ ನಿಭಾಯಿಸಿದರು'' ಎಂದು ಪ್ರಶಂಸಿದರು.
ಇದನ್ನೂ ಓದಿ; ಬ್ರಾಹ್ಮಣರು ಜಾಗತಿಕವಾಗಿ ಯಹೂದಿಗಳಂತೆ ಎದ್ದು ನಿಲ್ಲಬೇಕಿದೆ: ರೋಹಿತ್ ಚಕ್ರತೀರ್ಥ
''ಕೊವಿಡ್ ವೇಳೆ ಜನರ ಪ್ರಾಣ ಉಳಿಸಲು ಬಿಎಸ್ ವೈ ಸರ್ಕಾರ ಪ್ರಯತ್ನಿಸಿತ್ತು. ಕಷ್ಟದ ಸಂದರ್ಭದಲ್ಲಿ ಯಡಿಯೂರಪ್ಪ ರಾಜ್ಯವನ್ನು ಕಾಪಾಡಿದರು. ಬಿ.ಎಸ್. ಯಡಿಯೂರಪ್ಪ ಬಳಿಕ ಅಧಿಕಾರಕ್ಕೆ ಬಂದವರು ಮಾಡಿದ್ದೇನು? ಬಿಎಸ್ವೈರಿಂದ ಅಧಿಕಾರ ಪಡೆದ ಅತಿರಥ ಮಹಾರಥರು ಮಾಡಿದ್ದೇನು? ಕಾರ್ಯಕರ್ತರ ಇಚ್ಛೆಗೆ ತಕ್ಕಂತೆ ನಡೆದು ಕೊಂಡರಾ? ಪ್ರವೀಣ್ ನೆಟ್ಟಾರು, ಹರ್ಷ ಕೊಲೆಯಾದಾಗ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಮತ್ತೆ ಅಧಿಕಾರಕ್ಕೆ ತರಬೇಕೆಂಬ ಉತ್ಸಾಹ ಅವರಲ್ಲಿ ಯಾಕೆ ಕಾಣಲಿಲ್ಲ?'' ಎಂದು ಮಾಜಿ ಸಿಎಂ ಬೊಮ್ಮಾಯಿ ವಿರುದ್ಧ ಪ್ರತಾಪ ಸಿಂಹ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.







