ಆ್ಯಂಟಿ ಕಮ್ಯುನಲ್ ವಿಂಗ್‌ನಿಂದ ಭಯದ ವಾತಾವರಣ ಸೃಷ್ಟಿ: ಯಶ್ಪಾಲ್ ಸುವರ್ಣ

ಉಡುಪಿ, ಜೂ.16: ರಾಜ್ಯ ಸರಕಾರ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೇಂದ್ರವಾಗಿರಿಸಿಕೊಂಡು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪಿಸಲು ಹೊರಟಿದ್ದು, ಇದರಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಲಿದೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.
ಉಡುಪಿಯ ತಮ್ಮ ಗೃಹ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಂಗ್ ಸ್ಥಾಪನೆಯಿಂದ ಮಂಗಳೂರಿನಲ್ಲಿರುವ ಧಾರ್ಮಿಕ ಕೇಂದ್ರಗಳಿಗೆ ಬರುವ ಭಕ್ತರಲ್ಲಿ ಭಯದ ವಾತಾವರಣ ಸೃಷ್ಟಿಯಾಗು ತ್ತದೆ. ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಪೋಷಕರಲ್ಲಿ ಇದು ಆತಂಕ ಮೂಡಿಸಲಿದೆ. ಪೋಷಕರು ತಮ್ಮ ಮಕ್ಕಳವನ್ನು ಕಾಲೇಜುಗಳಿಗೆ ಕಳುಹಿಸಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಎದುರಾಗು ತ್ತದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಸಾಕಷ್ಟು ವಿಪುಲ ಅವಕಾಶ ಇದೆ. ಆದರೆ ಸಿದ್ದರಾಮಯ್ಯ ಸರಕಾರ ಅಭಿವೃದ್ಧಿಯನ್ನು ಬದಿಗಿಟ್ಟು, ಈ ವಿಂಗ್ ಸ್ಥಾಪನೆ ಮಾಡುವ ಮೂಲಕ ಒಂದು ಸಮುದಾಯದ ಓಲೈಕೆಗೆ ಮುಂದಾಗಿದೆ. ಮಂಗಳೂರಿನಲ್ಲಿ ಎನ್‌ಐಎ ಘಟಕ ಸ್ಥಾಪನೆಗೆ ಕಾಂಗ್ರೆಸ್ ನಾಯಕರು ಹಾಗೂ ಎಸ್‌ಡಿಪಿಐ ಸಂಘಟನೆ ಸಹಕಾರ ನೀಡಿಲ್ಲ. ಆದರೆ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆಯ ವಿಚಾರವನ್ನು ಎಸ್‌ಡಿಪಿಐ ಮೊದಲು ಸ್ವಾಗತಿಸಿದೆ. ಇದರಿಂದ ಎಸ್‌ಡಿಪಿಐ ನಿಜ ಬಣ್ಣ ಬಯಲಾಗಿದೆ. ಎಸ್‌ಡಿಪಿಐ ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು ಎಂದು ಅವರು ಟೀಕಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕತೆ ಹಾಗೂ ಅಭಿವೃದ್ಧಿಗೆ ಕೊಡಲಿ ಏಟು ಹಾಕುವ ಕೆಲಸಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ಆದುದರಿಂದ ರಾಜ್ಯ ಸರಕಾರ ಕೂಡಲೇ ಈ ಬಗ್ಗೆ ಪುನರ್ ಪರಿಶೀಲನೆ ನಡೆಸಿ, ಈ ವಿಂಗ್ ಸ್ಥಾಪನೆ ಪ್ರಸ್ತಾಪವನ್ನು ವಾಪಾಸ್ಸು ಪಡೆಯಬೇಕು. ಅದೇ ರೀತಿ ಆ್ಯಂಟಿ ಕಮ್ಯುನಲ್ ವಿಂಗ್ ಯಾವ ಚೌಕಟ್ಟಿನಲ್ಲಿ ಕೆಲಸ ಮಾಡಲಿದೆ ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದರು. ಐದು ಭಾಗ್ಯ ಜಾರಿ ಮಾಡಲು ಹೊರಟಿರುವ ರಾಜ್ಯ ಸರಕಾರಕ್ಕೆ ಆರ್ಥಿಕ ಮೂಲದ ಸ್ಪಷ್ಟತೆ ಇಲ್ಲ. ಜನರನ್ನ ದಿಕ್ಕು ತಪ್ಪಿಸುವ ಕೆಲಸ ಸರಕಾರ ಮಾಡುತ್ತಿದೆ. ಮತಾಂತರ ನಿಷೇಧ ಕಾನೂನು ಹಿಂಪಡೆಯುವ ಹೇಳಿಕೆ ಮರುಪರಿಶೀಲಿಸಬೇಕು. ಓಟು ಬ್ಯಾಂಕಿಂಗ್‌ಗೆ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ ಎಂದ ಅವರು, ಒಂದು ಸಮಯದಾಯದ ಓಲೈಕೆಗೆ ಪಠ್ಯ ಬದಲಾವಣೆಗೆ ಸರಕಾರ ಮುಂದಾಗಿದೆ. ಈ ಬಗ್ಗೆ ಎಚ್ಚೆತ್ತು ಕೊಳ್ಳದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.







