ಜೂ.19ರಿಂದ ಜುಲೈ 6 ರವರೆಗೆ ಕುಷ್ಠರೋಗ ಪತ್ತೆ ಅಭಿಯಾನ: ದ.ಕ. ಡಿಎಚ್‌ಒ

ಮಂಗಳೂರು, ಜೂ.16: ಕುಷ್ಠರೋಗವು ಅನುವಂಶಿಕವಾಗಿ ಬರುವ ರೋಗವಲ್ಲ. ಅದರ ವಿರುದ್ಧದ ಹೋರಾಟದಲ್ಲಿ ವೈದ್ಯಕೀಯ ಕ್ಷೇತ್ರವು ಗಮನಾರ್ಹ ಯಶಸ್ಸು ಸಾಧಿಸಿದ್ದರೂ ಕೂಡ ಸಾಮಾಜಿಕವಾಗಿ ಸಾಧಿಸಬೇಕಾದದ್ದು ಬಹಳಷ್ಟಿದೆ. ಹಾಗಾಗಿ ಜೂ.19ರಿಂದ ಜುಲೈ 6 ರವರೆಗೆ ಕುಷ್ಠರೋಗ ಪತ್ತೆ ಅಭಿಯಾನ ಕೈಗೊಳ್ಳಲಾಗಿದೆ ಎಂದು ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಅಭಿಪ್ರಾಯಪಟ್ಟರು.
2023-24ನೇ ಸಾಲಿನ ಎಲ್‌ಸಿಡಿಸಿ ಕುಷ್ಠರೋಗ ವಿಶೇಷ ಸಮೀಕ್ಷೆ ಅಂಗವಾಗಿ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುಷ್ಠರೋಗದ ಬಗ್ಗೆ ಇರುವ ಸಾಮಾಜಿಕ ಸಮಸ್ಯೆಯನ್ನು ಬಗೆಹರಿಸದ ಹೊರತು ಕುಷ್ಠರೋಗ ಮುಕ್ತ ಭಾರತದ ದೃಷ್ಟಿಕೋನವನ್ನು ಸಾಧಿಸಲಾಗದು. ಕಳೆದ ಮೂರು ದಶಕಗಳಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದ್ದರೂ ಸಹ ಭಾರತ ವಿಶ್ವದ ಶೇ.59ರಷ್ಟು ಕುಷ್ಟರೋಗಿಗಳ ನೆಲೆಯಾಗಿದೆ ಎಂದರು.
ಜಿಲ್ಲಾದ್ಯಂತ ಜೂ.19ರಿಂದ ಜುಲೈ 6ರವರೆಗೆ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ ಹಮ್ಮಿಕೊಳ್ಳ ಲಾಗಿದ್ದು, ಈ ಪ್ರಕರಣ ಪತ್ತೆ ಹಚ್ಚುವ ಸಲುವಾಗಿ ಆರೋಗ್ಯ ಇಲಾಖೆಯ ತಂಡಗಳು ಮನೆ-ಮನೆಗೆ ಭೇಟಿ ನೀಡಿ ರೋಗದ ಲಕ್ಷಣಗಳನ್ನು ಗುರುತಿಸಿ ಸ್ಪರ್ಶಜ್ಞಾನ, ನೋವು, ನವೆ ಇಲ್ಲದ ತಾಮ್ರ ಅಥವಾ ತಿಳಿ ಬಿಳುಪಾದ ಮಚ್ಚೆಗಳು ಕಂಡುಬಂದ ಪ್ರಕರಣಗಳನ್ನು ಗುರುತಿಸಿ, ಅವರಿಗೆ ಹೆಚ್ಚಿನ ಚಿಕಿತ್ಸೆಯ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ.ಸುದರ್ಶನ್ ಮತ್ತಿತರ ಇಲಾಖಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.