ಬಜರಂಗದಳ ಸದಸ್ಯರ ಮೇಲೆ ಲಾಠಿ ಚಾರ್ಜ್ ಮಾಡಿದ ಪೊಲೀಸ್ ಅಧಿಕಾರಿ ಅಮಾನತು

ಇಂದೋರ್: ಗುರುವಾರ ಬೆಳಗ್ಗೆ, ಪ್ರತಿಭಟನೆಯೊಂದರ ವೇಳೆ ರಸ್ತೆ ತಡೆದು ವಾಹನಗಳಿಗೆ ಹಾನಿ ಮಾಡಿದ್ದ ಬಜರಂಗ ದಳದ ಸದಸ್ಯರ ಮೇಲೆ ಲಾಠಿ ಚಾರ್ಚ್ ನಡೆಸಿರುವುದಕ್ಕಾಗಿ ಇಂದೋರ್ ನ ಪೊಲೀಸ್ ಅಧಿಕಾರಿಯೊಬ್ಬರನ್ನು ಅವರ ಠಾಣಾ ಮುಖ್ಯಸ್ಥನ ಜವಾಬ್ದಾರಿಯಿಂದ ತೆರವುಗೊಳಿಸಲಾಗಿದೆ.
ಗುರುವಾರ ಬಜರಂಗ ದಳದ ಸದಸ್ಯರು ಮಾದಕವಸ್ತು ವ್ಯಾಪಾರ ನಡೆಯುತ್ತಿದೆ ಎಂದು ಆರೋಪಿಸಿ ಇಂದೋರ್ ನ ನಿಬಿಡ ಪಲಾಸಿಯ ಚೌಕದಲ್ಲಿ ಧರಣಿ ನಡೆಸುತ್ತಿದ್ದರು ಎಂದು ಹಿಂದಿ ಪತ್ರಿಕೆ ‘ದೈನಿಕ್ ಭಾಸ್ಕರ್’ ವರದಿ ಮಾಡಿದೆ. ಪ್ರತಿಭಟನಾ ಸ್ಥಳದಿಂದ ತೆರಳುವಂತೆ ಪೊಲೀಸರು ಪ್ರತಿಭಟನಾನಿರತರನ್ನು ವಿನಂತಿಸಿದರು ಎನ್ನಲಾಗಿದೆ. ಆದರೆ, ಅವರು ತಮ್ಮ ಧರಣಿಯನ್ನು ಮುಂದುವರಿಸಿದರು.
ಪ್ರತಿಭಟನೆಯಿಂದಾಗಿ ಟ್ರಾಫಿಕ್ ಜಾಮ್ ಸಂಭವಿಸಿದಾಗ, ಪೊಲೀಸರು ಬಜರಂಗ ದಳ ಸದಸ್ಯರ ಮೇಲೆ ಲಾಠಿ ಪ್ರಯೋಗ ಮಾಡಿದರು. ಆಗ ಕೆಲವು ಪ್ರತಿಭಟನಕಾರರು ಸಮೀಪದ ಛಪ್ಪನ್ ದೂಕಾನ್ ಪ್ರದೇಶಕ್ಕೆ ಓಡಿದರು. ಅಲ್ಲಿ ಅವರು ಕೆಲವು ವಾಹನಗಳನ್ನು ಹಾನಿಗೊಳಿಸಿದರು ಮತ್ತು ಪೊಲೀಸರತ್ತ ಕಲ್ಲು ತೂರಿದರು ಎನ್ನಲಾಗಿದೆ.
ಕಲ್ಲು ತೂರಾಟದಲ್ಲಿ ಐವರು ಪೊಲೀಸರು ಗಾಯಗೊಂಡರು. ಪೊಲೀಸರು 11 ಬಜರಂಗ ದಳ ಸದಸ್ಯರನ್ನು ವಶಕ್ಕೆ ಪಡೆದರು ಎಂದು ಪೊಲೀಸ್ಉಪಕಮಿಶನರ್ ಧರ್ಮೇಂದ್ರ ಸಿಂಗ್ ಭದೋರಿಯ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಬಂಧಿತರನ್ನು ಶುಕ್ರವಾರ ಬೆಳಗ್ಗೆ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ದರ್ಜೆಯ ಅಧಿಕಾರಿಯೊಬ್ಬರು ಘಟನೆಯ ಬಗ್ಗೆ ತನಿಖೆ ನಡೆಸಲಿದ್ದರೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಶುಕ್ರವಾರ ತಿಳಿಸಿದರು. ಅದೇ ವೇಳೆ, ಪಲಾಸಿಯ ಪೊಲೀಸ್ ಠಾಣೆಯ ಉಸ್ತುವಾರಿಯಾಗಿರುವ ಸಂಜಯ್ ಸಿಂಗ್ ರನ್ನು ಅವರ ಠಾಣೆಯ ಕರ್ತವ್ಯದಿಂದ ಹೊರಗಿಡಲಾಗಿದೆ ಎಂದು ಸಚಿವರು ಹೇಳಿದರು.
ಬಜರಂಗದಳ ಸದಸ್ಯರು ಪ್ರತಿಭಟನೆ ನಡೆಸಲು ಅನುಮತಿ ಪಡೆದಿಲ್ಲ ಎಂದು ಉಪ ಪೊಲೀಸ್ ಕಮಿಶನರ್ ಭದೋರಿಯ ಗುರುವಾರ ಹೇಳಿದ್ದರು.







