ಮರವಂತೆಯಲ್ಲಿ ಕಡಲ್ಕೊರೆತ ತೀವ್ರ: ಸಂಪರ್ಕ ರಸ್ತೆ ಕುಸಿತ

ಕುಂದಾಪುರ: ಬಿಪರ್ ಜಾಯ್ ಚಂಡಮಾರುತದಿಂದ ಸಮುದ್ರದ ಪ್ರಕ್ಷುಬ್ಧಗೊಂಡಿದ್ದು, ಬೃಹತ್ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿರುವ ಪರಿಣಾಮ ಮರವಂತೆಯ ಕರಾವಳಿ ಭಾಗವನ್ನು ಸಂಪರ್ಕಿಸುವ ರಸ್ತೆಯು ಶುಕ್ರವಾರ ಕುಸಿದಿರುವ ಬಗ್ಗೆ ವರದಿಯಾಗಿದೆ.
ಮರವಂತೆಯ ಮೀನುಗಾರರು ನೆಲೆಸಿರುವ ಕರಾವಳಿ ಭಾಗವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯು ಗುರುವಾರ ಸ್ವಲ್ಪ ಮಟ್ಟಿಗೆ ಕುಸಿದಿದ್ದು ಶುಕ್ರವಾರ ಕುಸಿತ ಇನ್ನಷ್ಟು ಜಾಸ್ತಿಯಾಗಿದೆ. ಇದರಿಂದ ಈ ರಸ್ತೆಯಲ್ಲಿ ಸಂಪರ್ಕ ಕಡಿತ ಭೀತಿ ಎದುರಾಗಿದೆ. ಈ ರಸ್ತೆಯ ಸಂಪರ್ಕ ಕಡಿತಗೊಂಡರೆ, ಈ ಭಾಗದಲ್ಲಿ ನೂರಾರು ಮನೆಗಳ ಸಂಪರ್ಕಕ್ಕೆ ತೊಡಕಾಗಲಿದೆ ಎಂಬ ಆತಂಕ ಇಲ್ಲಿನ ಮೀನುಗಾರರದ್ದು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಬೆಳಗ್ಗೆ ಮರವಂತೆಗೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿ ದರು. ಈ ವೇಳೆ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ ಅವರು, ಇಲ್ಲಿನ ಸಮಸ್ಯೆಯನ್ನು ತಿಳಿಸುವ ಪ್ರಯತ್ನ ಮಾಡಿದರು. ಜಿಲ್ಲಾಧಿಕಾರಿಗಳು ಈ ವಿಚಾರವನ್ನು ಮೀನುಗಾರಿಕಾ ಸಚಿವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಕಳೆದ ವರ್ಷದ ತೌಖ್ತೇ ಚಂಡಮಾರುತದ ವೇಳೆ ಕಾಂಕ್ರೀಟ್ ರಸ್ತೆಯು ಸಂಪೂರ್ಣ ಕುಸಿದು ಬಿದ್ದಿದ್ದು, ಆ ಬಳಿಕ ಮೀನುಗಾರರ ಸೇವಾ ಸಮಿತಿಯವರು ಸ್ವಂತ ಖರ್ಚಿನಲ್ಲಿ ಒಂದೂವರೆ ಲಕ್ಷ ರೂ. ಅನುದಾನವನ್ನು ಬಳಸಿಕೊಂಡು, ರಸ್ತೆ ದುರಸ್ತಿ ಮಾಡಿ, ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಿದ್ದೇವು. ಆ ಬಳಿಕ ಇಲ್ಲಿಗೆ ಹಿಂದಿನ ಸರಕಾರದ ಮುಖ್ಯಮಂತ್ರಿಗಳು, ಕಂದಾಯ, ಮೀನುಗಾರಿಕೆ ಸಚಿವರು, ಜಿಲ್ಲಾಧಿಕಾರಿಗಳು ಸಹಿತ ಎಲ್ಲರೂ ಇಲ್ಲಿಗೆ ಭೇಟಿ ನೀಡಿ ಹೋಗಿದ್ದಾರೆ. ಆದರೆ ಇಲ್ಲಿನ ರಸ್ತೆ ಅಥವಾ ಕಡಲ್ಕೊರೆತ ತಡೆಯ ಕಾಮಗಾರಿಗೆ ಒಂದೂ ರೂ. ಅನುದಾನ ಬಿಡುಗಡೆಗೊಂಡಿಲ್ಲ. ಇದರಿಂದಲೇ ಈಗ ಈ ರಸ್ತೆಯು ಸಂಪೂರ್ಣ ಕೊಚ್ಚಿ ಹೋಗುವ ಆತಂಕ ಎದುರಾಗಿದೆ ಎಂದು ಮೀನುಗಾರರು ಶಾಸಕರೊಂದಿಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಸ್ಥಳೀಯ ಪ್ರಮುಖರಾದ ದೀಪಕ್ ಕುಮಾರ್ ಶೆಟ್ಟಿ, ಕಟ್ಕೆರೆ ಪ್ರೇಮಾನಂದ ಶೆಟ್ಟಿ, ಸುರೇಶ್ ಶೆಟ್ಟಿ, ಅಶೋಕ ಶೆಟ್ಟಿ ಸಂಸಾಡಿ, ಅನಿತಾ, ವಾಸುದೇವ ಖಾರ್ವಿ, ಚಂದ್ರ ಖಾರ್ವಿ, ಶಂಕರ್ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
"ಬಿಪರ್ ಜಾಯ್ ಚಂಡಮಾರುತದಿಂದ ಕಡಲ್ಕೊರೆತ ಶುರುವಾಗಿ ವಾರವಾದರೂ ಇಲ್ಲಿಗೆ ಯಾರೂ ಪ್ರಮುಖ ಅಧಿಕಾರಿಗಳು ಬಂದಿಲ್ಲ. ಈ ಹಿಂದಿನ ಸರಕಾರದ ಎಲ್ಲರೂ ಬಂದಿದ್ದರೂ, ಅಧಿಕಾರಿಗಳು ಬಂದು ಹೋದರೂ ಇಲ್ಲಿಗೆ ಇನ್ನೂ ಶಾಶ್ವತ ಪರಿಹಾರ ದೊರಕಿಸಿ ಕೊಡಲಿಲ್ಲ. ನಾವೇ ತುರ್ತು ಕಾಮಗಾರಿ ಮಾಡಿಕೊಂಡಿದ್ದೇವೆ. ಆದರೆ ಸರಕಾರದಿಂದ ತಡೆಗೋಡೆ, ಕಡಲ್ಕೊರೆತ ತಡೆಗೆ ಏನೂ ಮಾಡಿಲ್ಲ. ರಸ್ತೆ, ಹಿಂದಿನ ವರ್ಷಗಳಲ್ಲಿ 500 ಕ್ಕೂ ಮಿಕ್ಕಿ ತೆಂಗಿನ ಮರ, 50-60 ಮೀನುಗಾರಿಕಾ ಶೆಡ್ ಕೊಚ್ಚಿಕೊಂಡು ಹೋಗಿದೆ. ಶಾಸಕರು, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು".
-ವಾಸುದೇವ ಖಾರ್ವಿ, ಅಧ್ಯಕ್ಷರು, ಮೀನುಗಾರರ ಶ್ರೀರಾಮ ಸೇವಾ ಸಮಿತಿ, ಮರವಂತೆ
"ಮೀನುಗಾರಿಕಾ ಸಚಿವರು ಕರಾವಳಿಯವರೇ ಆಗಿರುವುದರಿಂದ ಅವರಿಗೆ ಇಲ್ಲಿನ ಸಮಸ್ಯೆ ಅರ್ಥವಾಗಿದ್ದು, ನಮಗೆ ಸಚಿವರ ಬಗ್ಗೆ ವಿಶ್ವಾಸವಿದೆ. ನಾವು ಭೇಟಿ ಮಾಡಿದಾಗಲೂ ಭರವಸೆ ನೀಡಿದ್ದಾರೆ. ಇಲ್ಲಿ ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರದ ಜತೆಗೆ, ತುರ್ತು ಪರಿಹಾರ ಮಾಡಬೇಕು".
-ಗುರುರಾಜ್ ಗಂಟಿಹೊಳೆ, ಬೈಂದೂರು ಶಾಸಕರು