ಮುಸ್ಲಿಮರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಮಾಜಿ ಸಚಿವ ಎಂ.ಟಿ.ಬಿ.ನಾಗರಾಜು ವಿರುದ್ಧ ಹೊಸಕೋಟೆಯಲ್ಲಿ ಪ್ರತಿಭಟನೆ

ಬೆಂಗಳೂರು, ಜೂ. 16: ‘ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರು ನನ್ನ ಬಳಿ ಎಲ್ಲವನ್ನೂ ಪಡೆದು, ಅಲ್ಲಾಹ್ ಹಾಗೂ ಕುರ್‍ಆನ್ ಮೇಲೆ ಆಣೆ ಪ್ರಮಾಣ ಮಾಡಿ ನನಗೆ ಮೋಸ ಮಾಡಿದರು’ ಎಂದು ಆರೋಪಿಸಿರುವ ಮಾಜಿ ಸಚಿವ ಎಂ.ಟಿ.ಬಿ.ನಾಗರಾಜು ವಿರುದ್ಧ ಹೊಸಕೋಟೆಯಲ್ಲಿ ಮುಸ್ಲಿಮರು ಪ್ರತಿಭಟನಾ ಮೆರವಣಿಗೆ ನಡೆಸಿ, ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಮಧ್ಯಾಹ್ನ ಹೊಸಕೋಟೆ ತಾಲೂಕು ಮುಸ್ಲಿಮ್ ಫೋರಂ ನೇತೃತ್ವದಲ್ಲಿ ಜಾಮಿಯಾ ಮಸೀದಿಯಿಂದ ಮೆರವಣಿಗೆಯಲ್ಲಿ ಸಾಗಿದ ಸಾವಿರಾರು ಮುಸ್ಲಿಮರು, ತಾಲೂಕು ಕಚೇರಿ ಎದುರು ಇರುವ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಎಂ.ಟಿ.ಬಿ.ನಾಗರಾಜು ಅವರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮುಸ್ಲಿಮ್ ಮುಖಂಡ ಗಫಾರ್ ಬೇಗ್, ‘ಎಂ.ಟಿ.ಬಿ.ನಾಗರಾಜು ಅವರೆ ಯಾವ ಯಾವ ಮುಸ್ಲಿಮರು ನಿಮ್ಮ ಬಳಿ ಹಣ ಪಡೆದು, ಆಣೆ ಪ್ರಮಾಣ ಮಾಡಿದ್ದಾರೆ ಎಂಬ ವಿವರವನ್ನು ಬಹಿರಂಗಪಡಿಸಿ. ಈ ಚುನಾವಣೆಯಲ್ಲಿ ಮುಸ್ಲಿಮರು ನಿಮಗೆ ಯಾಕೆ ಬೆಂಬಲ ನೀಡಿಲ್ಲ ಎಂದು ನಿಮಗೆ ಗೊತ್ತಿಲ್ಲವೇ? ನಿಮ್ಮ ಸರಕಾರ ಹಲಾಲ್, ಹಿಜಾಬ್, 2ಬಿ ಮೀಸಲಾತಿ ರದ್ದು ಮಾಡಿತು. ಆ ಕಾರಣಕ್ಕಾಗಿ ಬಿಜೆಪಿಗೆ ಮುಸ್ಲಿಮರು ಮತ ನೀಡಬೇಕಿತ್ತಾ? ಎಂದು ಪ್ರಶ್ನಿಸಿದರು.
ನೀವು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಜಾತ್ಯತೀತ ಸಿದ್ಧಾಂತದ ಮೇಲೆ ಮತ ಕೇಳಿದ್ರಿ. ಮುಸ್ಲಿಮರು ನಿಮಗೆ ಬೆಂಬಲಿಸಿದರು. ಯಾಕೆ ನೀವು ನಿಮ್ಮನ್ನು ಮಾರಿಕೊಂಡ್ರಿ ಎಂಬುದಕ್ಕೆ ಉತ್ತರ ಕೊಡಿ. ನೀವು ಚುನಾವಣೆಯಲ್ಲಿ ಸೋತಿದಕ್ಕೆ ಒಂದು ಸಮುದಾಯವನ್ನು ಗುರಿ ಮಾಡಿ ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಬಹಿರಂಗವಾಗಿ ನೀವು ಮುಸ್ಲಿಮ್ ಸಮುದಾಯದ ಕ್ಷಮೆಯಾಚಿಸಲೇಬೇಕು. ಇಲ್ಲದಿದ್ದರೆ, ಮುಂದಿನ ಚುನಾವಣೆಗಳಲ್ಲಿ ನೀವು ಎಲ್ಲೆ ಸ್ಪರ್ಧೆ ಮಾಡಿದರೂ ನಿಮಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಡಾ.ಸೈಯದ್ ಮುಝಮ್ಮಿಲ್ ಅಹ್ಮದ್, ಖದೀರ್ ಹಾಗೂ ಇಮ್ತಿಯಾಝ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.







