ಭಾರತದಲ್ಲಿ ಮುಸ್ಲಿಮರು ಮತ್ತು ಎಸ್ಸಿಗಳು ಹೆಚ್ಚಿರುವ ಪ್ರದೇಶಗಳಲ್ಲಿ ಸಾರ್ವಜನಿಕ ಸೇವೆಗಳ ಕೊರತೆ: ಅಧ್ಯಯನ

ಹೊಸದಿಲ್ಲಿ: ಶಿಕ್ಷಣತಜ್ಞರಾದ ಸ್ಯಾಮ್ ಆಶೆರ್, ಕೃತಾರ್ಥ ಝಾ, ಅಂಜಲಿ ಅಡುಕಿಯಾ, ಪಾಲ್ ನೊವೊಸಾದ್ ಮತ್ತು ಬ್ರಾಂಡನ್ ಟ್ಯಾನ್ ಅವರು ನಡೆಸಿರುವ ಸಂಶೋಧನೆಯು ಭಾರತದ ನಗರ ಮತ್ತು ಗ್ರಾಮೀಣ ಪ್ರದೇಶಗಳಾದ್ಯಂತ ವಸತಿ ಪ್ರತ್ಯೇಕತೆ ಅಥವಾ ಸಮುದಾಯವನ್ನು ಆಧರಿಸಿ ಪ್ರತ್ಯೇಕ ಜೀವನವು ಆಳವಾಗಿ ಬೇರೂರಿದೆ ಎನ್ನುವುದನ್ನು ಕಂಡುಕೊಂಡಿದೆ.
ನಗರಗಳು ಹೆಚ್ಚು ಸಮಾನ ಸ್ಥಳಗಳು ಎಂಬ ಸಾಮಾನ್ಯ ನಂಬಿಕೆಯಿದ್ದರೂ ಭಾರತೀಯ ನಗರಗಳಲ್ಲಿ ಜಾತಿ ಮತ್ತು ಧರ್ಮದ ಆಧಾರದಲ್ಲಿ ಪ್ರತ್ಯೇಕತೆಯು ಅಮೆರಿಕದಲ್ಲಿಯ ಜನಾಂಗೀಯ ಪ್ರತ್ಯೇಕತೆಯಷ್ಟೇ ಹೆಚ್ಚಿರುವುದು ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ. ಅಧ್ಯಯನ ವರದಿಯಂತೆ ಭಾರತದಲ್ಲಿಯ ಶೇ.26ರಷ್ಟು ಮುಸ್ಲಿಮರು ಶೇ.80ಕ್ಕೂ ಹೆಚ್ಚಿನ ಮುಸ್ಲಿಂ ಜನಸಂಖ್ಯೆಯ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಶೇ.17ರಷ್ಟು ಪರಿಶಿಷ್ಟರು ಶೇ.80ಕ್ಕೂ ಹೆಚ್ಚಿನ ಪರಿಶಿಷ್ಟ ಜಾತಿಗಳ ಜನಸಂಖ್ಯೆಯ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಎಸ್ಸಿಗಳಿಗೆ ಪ್ರತ್ಯೇಕತೆಯು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮಾನವಾಗಿ ಹೆಚ್ಚಿದ್ದರೆ,ನಗರ ಪ್ರದೇಶಗಳಲ್ಲಿ ಮುಸ್ಲಿಮರ ಪ್ರತ್ಯೇಕತೆಯು ಹೆಚ್ಚಾಗಿದೆ.
ಈ ವಸತಿ ಪ್ರತ್ಯೇಕತೆಗಳು ತಮ್ಮದೇ ಆದ ಪರಿಣಾಮಗಳನ್ನು ಹೊಂದಿವೆ. ಸಾಮಾಜಿಕ ಸ್ವರೂಪದಲ್ಲಿ ವಿಭಜನೆಗಳನ್ನು ಬೆಟ್ಟು ಮಾಡಿರುವ ಸಂಶೋಧಕರು, ಸರಕಾರವು ಒದಗಿಸಿರುವ ಸಾರ್ವಜನಿಕ ಸೇವೆಗಳು ಮುಸ್ಲಿಮರು ಮತ್ತು ಎಸ್ಸಿಗಳ ಬಾಹುಳ್ಯವಿರುವ ಪ್ರದೇಶಗಳಲ್ಲಿ ಕಂಡು ಬರುವ ಸಾಧ್ಯತೆಗಳು ಕಡಿಮೆ ಎಂದೂ ಹೇಳಿದ್ದಾರೆ.
ಇದು ಪ್ರತಿಯೊಂದೂ ಸೇವೆಗೂ ಅನ್ವಯಿಸುತ್ತದೆ. ಪ್ರೌಢ ಶಾಲೆಗಳು, ಕ್ಲಿನಿಕ್ ಗಳು ಮತ್ತು ಆಸ್ಪತ್ರೆಗಳು,ವಿದ್ಯುತ್,ನೀರು ಪೂರೈಕೆ ಮತ್ತು ಒಳಚರಂಡಿ ಇವೆಲ್ಲವೂ ನಗರಗಳ ಇತರ ಭಾಗಗಳಿಗೆ ಹೋಲಿಸಿದರೆ ಮುಸ್ಲಿಮರು ಮತ್ತು ಎಸ್ಸಿಗಳ ಬಡಾವಣೆಗಳಲ್ಲಿ ತೀರ ಕೆಟ್ಟದಾಗಿವೆ. ಅಪವಾದವೆಂದರೆ ನಗರ ಪ್ರಾಥಮಿಕ ಶಾಲೆಗಳು,ಇವು ನಗರಗಳಲ್ಲಿಯ ಎಸ್ಸಿ ಬಡಾವಣೆಗಳಲ್ಲಿ ಹೆಚ್ಚು ಸಾಮಾನ್ಯವಾಗಿವೆ. ಆದರೆ ಗ್ರಾಮೀಣ ಎಸ್ಸಿ ಬಡಾವಣೆಗಳು ಹಾಗೂ ನಗರ ಮತ್ತು ಗ್ರಾಮೀಣ ಮುಸ್ಲಿಂ ಬಡಾವಣೆಗಳಲ್ಲಿ ಇವುಗಳ ಸಂಖ್ಯೆ ಕಡಿಮೆಯೇ ಇದೆ. ಸೇವಾ ಲಭ್ಯತೆಗಳಲ್ಲಿಯ ವ್ಯತ್ಯಾಸಗಳು ಸಾಂಖ್ಯಿಕವಾಗಿ ಮಹತ್ವದ್ದಾಗಿವೆ ಮತ್ತು ಗಣನೀಯವಾಗಿವೆ ಎಂದು ವರದಿಯು ತಿಳಿಸಿದೆ.
ಈ ರಚನಾತ್ಮಕ ಅಸಮಾನತೆಗಳ ಪರಿಣಾಮವಾಗಿ ಮಕ್ಕಳು ಒಳ್ಳೆಯ ಅವಕಾಶಗಳಿಂದ ವಂಚಿತರಾಗಿ ಬೆಳೆಯುತ್ತಿದ್ದಾರೆ ಮತ್ತು ಇದರಿಂದಾಗಿ ಅಸಮಾನತೆಗಳು ಇನ್ನಷ್ಟು ಆಳವಾಗಿ ಬೇರೂರುತ್ತವೆ ಎಂದಿರುವ ವರದಿಯು,ಮುಸ್ಲಿಮರು ಮತ್ತು ಎಸ್ಸಿಗಳ ಸಂಖ್ಯೆ ಕಡಿಮೆಯಿರುವ ನಗರ ಪ್ರದೇಶದ ಬಡಾವಣೆಗಳಲ್ಲಿ ಮಕ್ಕಳು ಸರಾಸರಿ 9.2 ವರ್ಷಗಳ ಶಾಲಾ ಶಿಕ್ಷಣವನ್ನು ಪಡೆಯುತ್ತಾರೆ ಮತ್ತು ಶೇ.100ರಷ್ಟು ಎಸ್ಸಿ ಜನಸಂಖ್ಯೆಯಿರುವ ಅದೇ ನಗರ ಪ್ರದೇಶದ ಬಡಾವಣೆಗಳಲ್ಲಿ ಮಕ್ಕಳು ಸರಾಸರಿ 7.6 ವರ್ಷಗಳ ಶಾಲಾ ಶಿಕ್ಷಣವನ್ನು ಪಡೆಯುತ್ತಾರೆ. ಮುಸ್ಲಿಮ್ ಬಡಾವಣೆಗಳಲ್ಲಿ ಸ್ಥಿತಿ ಇನ್ನೂ ಕೆಟ್ಟದ್ದಾಗಿದೆ,ಅವರು ಸರಾಸರಿ ಕೇವಲ 5.4 ವರ್ಷಗಳ ಶಾಲಾಶಿಕ್ಷಣವನ್ನು ಹೊಂದಿದ್ದಾರೆ ಎಂದ ತಿಳಿಸಿದೆ.
ಶೋಷಿತ ಸಮುದಾಯಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿಯ ಎಲ್ಲ ನಿವಾಸಿಗಳೂ ಸಾರ್ವಜನಿಕ ಸೇವೆಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಮುಸ್ಲಿಮರು ಮತ್ತು ಎಸ್ಸಿಗಳು ಬಹುಸಂಖ್ಯಾಕರಾಗಿರುವ ಪ್ರದೇಶಗಳಲ್ಲಿ ಎಸ್ಸಿಗಳು ಮತ್ತು ಮುಸ್ಲಿಮರು ಮತ್ರವಲ್ಲ,ಎಲ್ಲ ಸಮುದಾಯಗಳೂ ಶಿಕ್ಷಣ ಸೌಲಭ್ಯದ ಹೆಚ್ಚಿನ ಕೊರತೆಯನ್ನು ಎದುರಿಸುತ್ತಿವೆ ಎನ್ನುವುದು ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ.
ಅಧ್ಯಯನವು 2011-13ರ ಡೇಟಾವನ್ನು ಆಧರಿಸಿದೆ. ಫಲಿತಾಂಶಗಳು ಯಾವುದೇ ನಿರ್ದಿಷ್ಟ ಸರಕಾರದ ನಿರ್ದಿಷ್ಟ ನೀತಿಗಳನ್ನು ಸೂಚಿಸುವುದಿಲ್ಲ ಮತ್ತು ಸಮಯದ ಕಾರಣದಿಂದಾಗಿ ಪ್ರಸ್ತುತ ಸರಕಾರದ ನೀತಿಗಳ ಕುರಿತು ಅಥವಾ ಕಳೆದೊಂದು ದಶಕದಲ್ಲಿ ಏನು ಬದಲಾವಣೆಯಾಗಿದೆ ಎಂಬ ಬಗ್ಗೆ ಏನನ್ನೂ ಹೇಳುವುದಿಲ್ಲ ಎಂದು ಸಂಶೋಧಕರು ವರದಿಯಲ್ಲಿ ಹೇಳಿದ್ದಾರೆ.







