ಮಕ್ಕಳು ಶಾಲೆ ಹೊರಗೆ ಕೂರುವುದನ್ನು ಕಂಡು ಕೋರ್ಟ್ ಮೂಕ ಪ್ರೇಕ್ಷಕನಾಗಲು ಸಾಧ್ಯವಿಲ್ಲ: ಹೈಕೋರ್ಟ್ ಎಚ್ಚರಿಕೆ

ಬೆಂಗಳೂರು, ಜೂ.16: ಪಡೆದ ಸಾಲವನ್ನು ಮರುಪಾವತಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಶಾಲಾ ಕಟ್ಟಡ ಮತ್ತು ಜಾಗವನ್ನು ಹರಾಜು ಪ್ರಕ್ರಿಯೆಗೆ ಮುಂದಾದ ಪರಿಣಾಮ ಕಟ್ಟಡದ ಹೊರಭಾಗದ ತೆರೆದ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನೆಲಮಂಗಲದ ಕಣ್ವ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಕಟ್ಟಡದ ತರಗತಿಯೊಳಗೆ ವಿದ್ಯಾಭಾಸ ಮುಂದುವರಿಸಲು ಅನುಮತಿ ನೀಡುವಂತೆ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್‍ಗೆ ಹೈಕೋರ್ಟ್ ನಿರ್ದೇಶಿಸಿದೆ. ಅಲ್ಲದೆ, ಇಂತಹ ವಿಚಾರದಲ್ಲಿ ಕೋರ್ಟ್ ಮೂಕ ಪ್ರೇಕ್ಷಕನಾಗಲು ಸಾಧ್ಯವಿಲ್ಲ ಎಂದು ಹೇಳಿದೆ.
ನೆಲಮಂಗಲದಲ್ಲಿ ಕಣ್ವ ಎಜುಕೇಷನ್ ಟ್ರಸ್ಟ್ ನಡೆಸುತ್ತಿರುವ ಕಣ್ವ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳ ಪೋಷಕರಾದ ಎಂ.ಆರ್.ಹರೀಶ್ ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ನಿರ್ದೇಶನ ನೀಡಿದೆ.
ಅಲ್ಲದೇ, ಮಕ್ಕಳು ಈ ದೇಶದ ಭವಿಷ್ಯ. ಅವರು ತೆರೆದ ಪ್ರದೇಶದಲ್ಲಿ ಕೂತು ಬಿಸಿಲು ಮತ್ತು ಮಳೆಗೆ ಮೈಯೊಡ್ಡುವಂತಾಗಬಾರದು. ಈಗಾಗಲೇ ಮುಂಗಾರು ಆರಂಭವಾಗಿದೆ. ಅಬ್ಬರದ ಮಳೆ ಭೀತಿಯೊಂದಿಗೆ ತೆರೆದ ಪ್ರದೇಶದಲ್ಲಿ ನೂರಾರು ಅಮಾಯಕ ಮಕ್ಕಳು ಕೂತಿರುವುದನ್ನು ಕಂಡು ನ್ಯಾಯಾಲಯ ಮೂಕ ಪ್ರೇಕ್ಷಕನಂತೆ ಇರಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಹೀಗಾಗಿ, ಕೂಡಲೇ ಮಕ್ಕಳು ಶಾಲಾ ತರಗತಿಯಲ್ಲಿ ಕೂತು ವಿದ್ಯಾಭ್ಯಾಸ ಮುಂದುವರಿಸಲು ಅನುಮತಿ ನೀಡಬೇಕು ಎಂದು ಬ್ಯಾಂಕಿಗೆ ಮಧ್ಯಂತರ ಆದೇಶದ ಮೂಲಕ ನಿರ್ದೇಶಿಸಿದೆ.







