ಹಿಂದೂ ಧರ್ಮ ಉಳಿಸಿಕೊಳ್ಳಲು 'ಮಹಾ ಪಂಚಾಯತ್' ಕರೆಯುವಂತೆ ಮಠಾಧೀಶರಿಗೆ ಸಿ.ಟಿ.ರವಿ ಕರೆ

ಚಿಕ್ಕಮಗಳೂರು, ಜೂ.16: 'ಸಾಮ, ದಾನ, ಭೇದ, ದಂಡ ನಾಲ್ಕುನ್ನು ಬಳಸಿ ಮರು ಮತಾಂತರಕ್ಕೆ ಮುಂದಾಗುವ ಅನಿವಾರ್ಯತೆ ಇದೆ. ಮತಾಂತರ ನಿಷೇಧ ಕಾಯ್ದೆ ಹಿಂದಕ್ಕೆ ಪಡೆದಿರುವುದರಿಂದ ದೇಶ ಮತ್ತು ಹಿಂದೂ ಧರ್ಮ ಉಳಿಸಿಕೊಳ್ಳಲು ಸಾಧ್ಯ. ಎಲ್ಲಾ ಸಮುದಾಯಗಳ ಮಠಾಧೀಶರು ಮಹಾ ಪಂಚಾಯತ್ ಕರೆಯಬೇಕು' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, 'ಆಸೆ, ಆಮಿಷ, ಬಲತ್ಕಾರ, ಮೋಸದ ಮತಾಂತರಕ್ಕೆ ನಿಷೇಧ ಇದೆ. ಬಲವಂತದ ಮತಾಂತರ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವೇನು, ಇದರ ಪರವಾಗಿ ಕಾಂಗ್ರೆಸ್ ಇದೆಯೇ' ಎಂದು ಪ್ರಶ್ನಿಸಿದರು.
'ನಮ್ಮನ್ನು ನಾವು ಉಳಿಸಿಕೊಳ್ಳಲು ಸ್ವರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು. ಬೇರೆ ಬೇರೆ ಕಾರಣಕ್ಕೆ ಹಿಂದೂ ಧರ್ಮ ದಿಂದ ಹೊರ ಹೋದವರನ್ನು ಮರಳಿ ಕರೆ ತರಬೇಕಾದ ಅನಿವಾರ್ಯತೆ ಇದೆ' ಎಂದು ಹೇಳಿದರು.
'ಚಕ್ರವರ್ತಿ ಸೂಲಿಬೆಲೆ ಬರೆದಿರುವ ಲೇಖನ ದೇಶಪ್ರೇಮಿಗಳ ಬಗ್ಗೆ ಹೊರತು ಅವರ ಜೀವನ ಚರಿತ್ರೆಯಲ್ಲ. ಭಗತ್‍ಸಿಂಗ್, ರಾಜಗುರು, ಸುಖದೇವ್ ಹಾಗೂ ಹೆಡಗೇವಾರ್ ಅವರ ಕುರಿತ ಪಾಠಗಳನ್ನು ಪಠ್ಯದಿಂದ ಕೈಬಿಡಲಾಗಿದೆ. ಕಾಂಗ್ರೆಸ್ ನಾಯಕರಿಗೆ ದೇಶಭಕ್ತಿ ಎಂದರೇ ಅಸಹನೆ ಎಂಬುದು ಇದರಿಂದ ಅರ್ಥವಾಗುತ್ತದೆ' ಎಂದರು.
'ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ ಜೊತೆ ರಾಹುಲ್ ಗಾಂಧಿ ಒಪ್ಪಂದ ದೇಶಭಕ್ತಿಗೆ ವಿರುದ್ಧವಾದುದು ಎಂಬ ಅನುಮಾನ ಬರುತ್ತಿದೆ ಎಂದ ಅವರು, ಕಾಂಗ್ರೆಸ್‍ಗೆ ಅಂಬೇಡ್ಕರ್ ಕಂಡರೆ ಮಾತ್ರ ಅಸಹನೆ ಎಂದುಕೊಂಡಿದ್ದೆ. ಭಗತ್ ಸಿಂಗ್, ರಾಜಗುರು, ಸುಖದೇವ್ ಬಗ್ಗೆಯೂ ಅಸಹನೆ ಇದೆ ಎಂಬುದು ಅರ್ಥವಾಗಿದೆ. ನಾವು ಇದೇ ಪಾಠಗಳನ್ನು ಜನರ ಮುಂದೆ ಕೊಂಡೊಯ್ಯುತ್ತೇವೆ. ತಪ್ಪು ಹುಡುಕಲು ಜನರನ್ನು ಕೇಳುತ್ತೇವೆ' ಎಂದು ಹೇಳಿದರು.
'ಎಪಿಎಂಸಿ ಕಾಯ್ದೆಯಿಂದ ರೈತರಿಗೆ ಅನೇಕ ಅನುಕೂಲಗಳು ಇತ್ತು ಆದರೆ, ರಾಜ್ಯ ಸರ್ಕಾರ ಹಿಂಪಡೆದಿದೆ. ಮತ್ತೇ ರೈತರನ್ನು ದಲ್ಲಾಳಿಗಳ ಕಪಿಮುಷ್ಟಿಗೆ ಸಿಲುಕಿಸಿದೆ ಎಂದ ಅವರು ಕಾಂಗ್ರೆಸ್ ಸುಳ್ಳು ಹೇಳಿ ರೈತರ ದಿಕ್ಕು ತಪ್ಪಿಸಿರುವುದು ಮುಂದೇ ರೈತರಿಗೆ ಅರ್ಥವಾಗಲಿದೆ' ಎಂದರು.







