ಶಿಕ್ಷಣದ ಅಮಿಷವೊಡ್ಡಿ ಕರೆತಂದ ಮಕ್ಕಳಿಗೆ ಬಲವಂತದ ದುಡಿಮೆ: ರಾಜಸ್ತಾನದ ಬಳೆ ತಯಾರಿಕಾ ಘಟಕದ 22 ಮಕ್ಕಳ ರಕ್ಷಣೆ
ಬಿಹಾರದಿಂದ ಕರೆತಂದ ಮಕ್ಕಳಿಗೆ ದಿನಕ್ಕೆ 18 ತಾಸುಗಳ ದುಡಿಮೆ

ಜೈಪುರ: ಶಿಕ್ಷಣ ಹಾಗೂ ಉದ್ಯೋಗದ ಭರವಸೆ ನೀಡಿ ಬಿಹಾರದ 22 ಮಂದಿ ಮಕ್ಕಳನ್ನು ಬಳೆ ತಯಾರಿಕಾ ಘಟಕದ ಕಿರಿದಾದ ಕೋಣೆಯಲ್ಲಿ ಕೂಡಿಹಾಕಿ, ದಿನಕ್ಕೆ 18 ತಾಸುಗಳ ದುಡಿಸುತ್ತಿದ್ದ ಜಾಲವೊಂದನ್ನು ರಾಜಸ್ತಾನದಲ್ಲಿ ಭೇದಿಸಲಾಗಿದೆ.
ತಮಗೆ ದೊರೆತ ಮಾಹಿತಿಯ ಆಧಾರದಲ್ಲಿ ರಾಜಸ್ಥಾನ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಎನ್ಜಿಓ ನಯಾ ಸವೇರಾದ ಜಂಟಿ ತಂಡವು ಜೂನ್ 11ರಂದು ಜೈಪುರದ ಭಟ್ಟಾ ಬಸ್ತಿ ಪ್ರದೇಶದ ಬಳೆ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ ಈ ಮಕ್ಕಳನ್ನು ರಕ್ಷಿಸಿದೆ.
ಬಳೆ ತಯಾರಿಕಾ ಘಟಕದಿಂದ 26 ಮಂದಿಯನ್ನು ರಕ್ಷಿಸಿದ್ದು, ಅವರಲ್ಲಿ 22 ಮಂದಿ ಅಪ್ರಾಪ್ತ ವಯಸ್ಕರಾಗಿದ್ದಾರೆ. ಅವರಲ್ಲಿ ಹೆಚ್ಚಿನವರು 7ರಿಂದ 11 ವರ್ಷದೊಳಗಿನವರಾಗಿದ್ದಾರೆ. ಇನ್ನು ಕೆಲವರು ಕಳೆದ ಎರಡು ಮೂರು ತಿಂಗಳುಗಳಿಂದ ಈ ಕೊಠಡಿಯಲ್ಲಿಯೇ ವಾಸಿಸುತ್ತಾ ಕೆಲಸ ಮಾಡುತ್ತಿದ್ದಾರೆ. ಇತರರು 10-15 ದಿನಗಳ ಹಿಂದೆ ಬಂದವರಾಗಿದ್ದಾರೆ. ಒಂದು ವೇಳೆ ಈ ಮಕ್ಕಳು ಅಸ್ವಸ್ಥರಾದಲ್ಲಿ ಅಥವಾ ದೂರು ನೀಡಿದಲ್ಲಿ, ಅವರನ್ನು ಮಾಲಕನನ್ನು ಹಿಗ್ಗಾಮುಗ್ಗಾ ಥಳಿಸುತ್ತಿದ್ದನೆನ್ನಲಾಗಿದೆ.
ತಮಗೆ ಕೆಲಸದ ಜೊತೆ ಶಿಕ್ಷಣವನ್ನು ಕೊಡಿಸುವುದಾಗಿ ಹೆತ್ತವರಿಗೆ ಅಮಿಷವೊಡ್ಡಿ ಏಜೆಂಟರುಗಳು ತಮ್ಮನ್ನು ಜೈಪುರಕ್ಕೆ ಕರೆತಂದಿರುವುದಾಗಿ ರಕ್ಷಿಸಲ್ಪಟ್ಟ ಮಕ್ಕಳು ತಿಳಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಮೂರು ಅಂತಸ್ತುಗಳ ಕಟ್ಟಡದ ಈ ಕೊಠಡಿಗೆ ಬೀಗಜಡಿದಿದ್ದರಿಂದ ಮಕ್ಕಳನ್ನು ರಕ್ಷಿಸಲು ತಾವು ಕಿಟಕಿ ಮೂಲಕ ಜಿಗಿಯಬೇಕಾಯಿತೆಂದು ತಂಡದ ಸದಸ್ಯರು ತಿಳಿಸಿದ್ದಾರೆ. ಬಳೆ ತಯಾರಿಕೆ ಘಟಕದ ಮಾಲಕನನ್ನು ಗುಡ್ಡು ಎಂದು ಗುರುತಿಸಲಾಗಿದ್ದು, ಆತ ಈಗ ತಲೆಮರೆಸಿಕೊಂಡಿದ್ದು, ಆತನಿಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.







