ಚೀನಾದಿಂದ ʼಸ್ಟಾರ್‌ವಾರ್ಸ್ʼ ಶೈಲಿಯ ಸೂಪರ್ ನೌಕೆ ನಿರ್ಮಾಣಕ್ಕೆ ಯೋಜನೆ
ಬೀಜಿಂಗ್: ಹಾಲಿವುಡ್ ನ ಜನಪ್ರಿಯ ಸಿನೆಮ `ಸ್ಟಾರ್‌ವಾರ್ಸ್'ನಲ್ಲಿ ಗಮನಸೆಳೆದ ಅತ್ಯಾಧುನಿಕ ವ್ಯವಸ್ಥೆಯ ಸೂಪರ್ ನೌಕೆಯನ್ನು ನಿರ್ಮಿಸಲು ಚೀನಾ ನೀಲನಕಾಶೆ ಸಿದ್ಧಪಡಿಸಿಕೊಂಡಿದೆ ಎಂದು `ಸೌತ್ ಚೀನಾ ಮಾರ್ನಿಂಗ್ ಪೋಸ್ಟ್' ವರದಿ ಮಾಡಿದೆ.
ಚೀನಾದ ನೌಕಾಯಾನ ವಿಜ್ಞಾನಿಯೊಬ್ಬರು ಭವಿಷ್ಯದ ಯುದ್ಧನೌಕೆಯ ನೀಲನಕ್ಷೆಯನ್ನು ಪ್ರಸ್ತುತಪಡಿಸಿದ್ದು ಇದು ಕಳೆದ ಸುಮಾರು 100 ವರ್ಷಗಳಿಂದ ಚಾಲ್ತಿಯಲ್ಲಿರುವ ಸಾಂಪ್ರದಾಯಿಕ ನೌಕಾ ರಚನೆಗೆ ಸವಾಲು ಹಾಕುತ್ತದೆ. ಚೀನಾದ ಅತ್ಯಾಧುನಿಕ ನೌಕಾ ತಂತ್ರಜ್ಞಾನಗಳ ಅಭಿವೃದ್ಧಿಗೆ ಪ್ರಮುಖ ಕಾರಣಕರ್ತರಾದ ಅಡ್ಮಿರಲ್ ಮಾ ವೆಯ್ಮಿಂಗ್ `ಸ್ಟಾರ್‌ವಾರ್ಸ್'ನ ರೀತಿಯ ಅತ್ಯಾಧುನಿಕ ನೌಕೆಯ ನೀಲನಕಾಶೆಯನ್ನು ಪ್ರಸ್ತುತಪಡಿಸಿದ್ದು ಇದು ನೌಕಾಯುದ್ಧದಲ್ಲಿ ಕ್ರಾಂತಿಕಾರಿ ಬೆಳವಣಿಗೆಯಾಗಿದೆ ಮತ್ತು ಇದುವರೆಗೆ ವಿಶ್ವವು ಕಂಡುಕೇಳರಿಯದಷ್ಟು ಆದುನಿಕ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಇದು ಕಳೆದ 100 ವರ್ಷಗಳಿಂದ ಜಾರಿಯಲ್ಲಿರುವ ನೌಕಾಪಡೆಗಳ ಯುದ್ಧರಚನೆಯನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ ಎಂದು ವೆಯ್ಮಿಂಗ್ ಹೇಳಿದ್ದಾರೆ.
ಮುಂದಿನ ತಲೆಮಾರಿನ ಈ ನೌಕೆ ಹೊಸ ನೌಕಾ ಯುದ್ಧವ್ಯವಸ್ಥೆಯನ್ನು ಒಳಗೊಂಡಿರುತ್ತದೆ ಮತ್ತು ವಿದ್ಯುತ್ಕಾಂತೀಯ ಶಸ್ತ್ರಾಸ್ತ್ರಗಳೊಂದಿಗೆ ದೃಢವಾದ ಪರಮಾಣು ಚಾಲಿತ ವಿದ್ಯುತ್ ವ್ಯವಸ್ಥೆಯನ್ನು ಒಳಗೊಂಡಿದೆ. ನೌಕೆಯ ಸುಧಾರಿತ ತಂತ್ರಜ್ಞಾನವು ಪರಿಣಾಮಕಾರಿಯಾಗಿ ನೌಕೆಯ ಶಕ್ತಿ ಮೂಲದಿಂದ ಶಕ್ತಿಯನ್ನು ಉನ್ನತ ಶಕ್ತಿಯ ಆಯುಧಗಳಿಗೆ ಅಗತ್ಯವಿರುವ ವಿದ್ಯುತ್ಕಾಂತೀಯ ಶಕ್ತಿಯಾಗಿ ಪರಿವರ್ತಿಸುತ್ತದೆ ಎಂದವರು ಹೇಳಿದ್ದಾರೆ.







