ಸುಡಾನ್ ನ 13 ದಶಲಕ್ಷ ಮಕ್ಕಳು ಮಾನವೀಯ ನೆರವಿನ ನಿರೀಕ್ಷೆಯಲ್ಲಿ: ಯುನಿಸೆಫ್ ವರದಿ

ಖಾರ್ಟಮ್: ಸೇನೆ ಮತ್ತು ಅರೆಸೇನಾ ಪಡೆಯ ನಡುವೆ ತೀವ್ರ ಸಂಘರ್ಷಕ್ಕೆ ವೇದಿಕೆಯಾಗಿರುವ ಸುಡಾನ್ ನಲ್ಲಿನ ಸುಮಾರು 13 ದಶಲಕ್ಷ ಮಕ್ಕಳಿಗೆ ಮಾನವೀಯ ನೆರವಿನ ತೀವ್ರ ಅಗತ್ಯವಿದೆ ಎಂದು ಯುನಿಸೆಫ್ ಹೇಳಿದೆ.
ಸುಡಾನ್ನಲ್ಲಿ ತೀವ್ರ ಸಂಘರ್ಷ ನಡೆಯುತ್ತಿರುವ ದರ್ಫುರ್ ಪ್ರಾಂತದಲ್ಲಿ 2,70,000 ಮಕ್ಕಳ ಸಹಿತ ಸುಡಾನ್ನಲ್ಲಿ ಒಟ್ಟು 1 ದಶಲಕ್ಷಕೂ ಅಧಿಕ ಮಕ್ಕಳು ಬಲವಂತದಿಂದ ಸ್ಥಳಾಂತರಗೊಂಡಿದ್ದಾರೆ. ಇನ್ನೂ ಹಲವು ಮಕ್ಕಳು ಭಾರೀ ಅಪಾಯದ ಪರಿಸ್ಥಿತಿಯಲ್ಲಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್) ಎಚ್ಚರಿಕೆ ನೀಡಿದೆ. ಸ್ಥಳಾಂತರಗೊಂಡ ಮಕ್ಕಳಲ್ಲಿ ಕನಿಷ್ಟ 330 ಮಕ್ಕಳು ಹತ್ಯೆಗೀಡಾಗಿದ್ದಾರೆ ಮತ್ತು 1,900ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ ಎಂದು ವರದಿ ಹೇಳಿದೆ. ಸುಡಾನ್ನ ಆರ್ಥಿಕತೆ ಮತ್ತು ಆರೋಗ್ಯ ವ್ಯವಸ್ಥೆ ತ್ವರಿತವಾಗಿ ಹದಗೆಡುತ್ತಿದೆ ಎಂದು ಕಳೆದ ಕೆಲ ವಾರಗಳಿಂದ ನೆರವು ವಿತರಿಸುವ ಕಾರ್ಯಕರ್ತರು ಎಚ್ಚರಿಸಿದ್ದಾರೆ.
ಸುಡಾನ್ನ ಭವಿಷ್ಯವೇ ಅಪಾಯದಲ್ಲಿದೆ. ಇಲ್ಲಿನ ಮಕ್ಕಳ ಹತ್ಯೆ ಮುಂದುವರಿದಿರುವುದು ಹಾಗೂ ಮಕ್ಕಳು ಅನುಭವಿಸುತ್ತಿರುವ ಸಂಕಷ್ಟವನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಯುನಿಸೆಫ್ನ ಸುಡಾನ್ ಪ್ರತಿನಿಧಿ ಮಂದೀಪ್ ಒ'ಬ್ರಿಯಾನ್ ಹೇಳಿದ್ದಾರೆ. ತಮ್ಮ ಯಾವುದೇ ಪಾತ್ರವಿಲ್ಲದ ಹಿಂಸಾತ್ಮಕ ಬಿಕ್ಕಟ್ಟಿನ ಭಾರವನ್ನು ಹೊತ್ತುಕೊಳ್ಳಬೇಕಿರುವುದರಿಂದ ಮಕ್ಕಳು ಭಯಾನಕ ಪರಿಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದಾರೆ.
ನಿಂದನೆ, ಸ್ಥಳಾಂತರ, ಗಾಯಗೊಳ್ಳುವುದು, ಆಹಾರದ ಕೊರತೆಯಿಂದ ಉಪವಾಸ ಬೀಳುವುದು, ಅಸ್ವಸ್ಥಗೊಳ್ಳುವುದು, ಅಪೌಷ್ಟಿಕತೆ ಇತ್ಯಾದಿ ಸಂಕಷ್ಟಗಳಿಂದ ಅವರೀಗ ಕವಲುದಾರಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಸ್ವಷ್ಛ ಕುಡಿಯುವ ನೀರಿನ ಕೊರತೆಯಿಂದ ಸಾವಿರಾರು ಮಕ್ಕಳು ನಿರ್ಜಲೀಕರಣ, ಅತಿಸಾರ ಮತ್ತು ಅಪೌಷ್ಟಿಕತೆಯ ಸಮಸ್ಯೆಯಲ್ಲಿದ್ದಾರೆ.
ಸುಡಾನ್ನಲ್ಲಿ ತುರ್ತು ನೆರವಿನ ತೀವ್ರ ಅಗತ್ಯವಿರುವ ಸುಮಾರು 13 ದಶಲಕ್ಷ ಮಕ್ಕಳಿಗೆ ನೆರವಾಗಲು ತಾನು ಸಿದ್ಧ. ಆದರೆ ಮಕ್ಕಳಿಗೆ ಸುರಕ್ಷಿತ, ಅನಿಯಂತ್ರಿತ ಮತ್ತು ಭದ್ರತೆ ಖಾತರಿಪಡಿಸುವ ಪ್ರವೇಶಕ್ಕೆ ಎಲ್ಲರೂ ಅವಕಾಶ ನೀಡಬೇಕಾಗಿದೆ ಎಂದು ಮಂದೀಪ್ ಒ'ಬ್ರಿಯಾನ್ ಹೇಳಿದ್ದಾರೆ.
ಸುಡಾನ್ನಲ್ಲಿ, ಅದರಲ್ಲೂ ವಿಶೇಷವಾಗಿ ಪಶ್ಚಿಮ ಮತ್ತು ಮಧ್ಯ ದರ್ಫುರ್ ಪ್ರಾಂತದಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಮತ್ತು ಸಕ್ರಿಯ ಹೋರಾಟ, ತೀವ್ರ ಅಭದ್ರತೆ ಮತ್ತು ಮಾನವೀಯ ನೆರವಿನ ಸರಕುಗಳನ್ನು ಲೂಟಿ ಮಾಡುವ ಪ್ರಕ್ರಿಯೆ ಇತ್ತೀಚಿನಬ ದಿನಗಳಲ್ಲಿ ಉಲ್ಬಣಿಸಿದೆ ಎಂದು ಯುನಿಸೆಫ್ ಹೇಳಿದೆ.
ಯುದ್ಧಪೀಡಿತ ವಲಯದಲ್ಲಿ 75%ದಷ್ಟು ಆಸ್ಪತ್ರೆಗಳು ಸೇವೆಯನ್ನು ಸ್ಥಗಿತಗೊಳಿಸಿವೆ. ಇದೀಗ ಮಳೆಗಾಲ ಆರಂಭವಾಗಲಿದ್ದು ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ಮಳೆಗಾಲದಲ್ಲಿ ದೇಶದ ಹಲವು ಹಳ್ಳಿಗಳನ್ನು ತಲುಪಲು ಕಷ್ಟವಾಗಿರುವುದರಿಂದ ಮತ್ತು ತಗ್ಗುಪ್ರದೇಶಗಳಲ್ಲಿ ಪ್ರವಾಹದ ಅಪಾಯ ಹೆಚ್ಚಿರುವುದರಿಂದ ಮಲೇರಿಯಾ, ಕಾಲರಾ ಮುಂತಾದ ನೀರಿನಿಂದ ಹರಡುವ ರೋಗಗಳು ಉಲ್ಬಣಿಸುವ ಅಪಾಯವಿದೆ ಎಂದು ಸುಡಾನ್ನ ವೈದ್ಯರ ಯೂನಿಯನ್ ವರದಿ ಮಾಡಿದೆ.
ಸುಡಾನ್ನಲ್ಲಿ ಈಗ ನಡೆಯುತ್ತಿರುವ ಹಿಂಸಾಚಾರದಲ್ಲಿ 2000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ.