ಶಿವಮೊಗ್ಗ | ಸಾರ್ವಜನಿಕ ಸ್ಥಳದಲ್ಲಿ ಪೊಲೀಸರು ಥಳಿಸಿದ ಆರೋಪ: ಮನನೊಂದ ಯುವಕ ಆತ್ಮಹತ್ಯೆ
ನಾಲ್ವರು ಪೊಲೀಸರ ವಿರುದ್ದ ಪ್ರಕರಣ ದಾಖಲು

ಶಿವಮೊಗ್ಗ, ಜೂ.17: ಪೊಲೀಸರಿಂದ ಸಾರ್ವಜನಿಕವಾಗಿ ಥಳಿತಕ್ಕೆ ಒಳಗಾಗಿದ್ದನೆನ್ನಲಾದ ಯುವಕನೋರ್ವ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನಲ್ಲಿ ನಡೆದಿರುವುದು ವರದಿಯಾಗಿದೆ. ಈ ಬಗ್ಗೆ ನಾಲ್ವರು ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿದೆ.
ಹೊಳೆಹೊನ್ನೂರಿನ ಕಣ್ಣೆಕೊಪ್ಪ ಗ್ರಾಮದ ಮಂಜುನಾಥ್ ಕೆ.(28) ಆತ್ಮಹತ್ಯೆ ಮಾಡಿಕೊಂಡ ಯುವಕ. ಕೂಲಿ ಕೆಲಸ ಮಾಡಿಕೊಂ ಜೀವನ ಸಾಗಿಸುತ್ತಿದ್ದ ಮಂಜುನಾಥ್ ಜೂ.11ರಂದು ಸಂಜೆ 6:30ರ ಸುಮಾರಿಗೆ ಹೊಳೆಹೊನ್ನೂರು ಹತ್ತಿರ ಇದ್ದಾಗ ಪೊಲೀಸರಾದ ಬಿಲ್ಲಾಳ್, ಲಿಂಗೇಗೌಡ್ರು, ಸುದರ್ಶನ್, ವಿಶ್ವನಾಥ್ ಎಂಬುವವರು ಸಾರ್ವಜನಿಕವಾಗಿ ಥಳಿಸಿದ್ದಲ್ಲದೆ, ಠಾಣೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.
ಅಂದು ರಾತ್ರಿ 8 ಗಂಟೆ ಸುಮಾರಿಗೆ ವಿಷಯ ತಿಳಿದ ಮೃತ ಮಂಜುನಾಥ್ ತಂದೆ ಹಾಗೂ ಸಹೋದರ ಠಾಣೆಗೆ ತೆರಳಿ ಮಂಜುನಾಥ್ ರನ್ನು ಬಿಡಿಸಿಕೊಂಡು ಬಂದಿದ್ದಾರೆ. ಈ ಘಟನೆ ನಂತರ ಮಂಜುನಾಥ್ ಖಿನ್ನತೆಗೆ ಜಾರಿದ್ದು, ಯಾರೊಂದಿಗೂ ಮಾತನಾಡದೇ ಮೌನಿಯಾಗಿದ್ದರೆನ್ನಲಾಗಿದೆ. ಜೂ.15ರಂದು ರಾತ್ರಿ 10 ಗಂಟೆ ಸುಮಾರಿಗೆ 'ತಾನು ಕ್ರಿಕೆಟ್ ನೋಡುತ್ತೇನೆ, ನೀನು ರೂಮಿನಲ್ಲಿ ಮಲಗು' ಎಂದು ಪತ್ನಿಗೆ ಹೇಳಿದ ಮಂಜುನಾಥ್ ಟಿವಿ ನೋಡುತ್ತಿದ್ದರೆನ್ನಲಾಗಿದೆ. ಜೂ.16ರಂದು ಬೆಳಗ್ಗೆ ಮಂಜುನಾಥ್ ಏದ್ದೇಳದ ಕಾರಣ ಅವರಿದ್ದ ಕೋಣೆಯ ಬಾಗಿಲನ್ನು ಪತ್ನಿ ತಟ್ಟಿದ್ದಾರೆ. ಬಾಗಿಲು ತೆಗೆಯದೆ ಇದ್ದಾಗ ಗಾಬರಿಗೊಂಡ ಅವರು ಅಕ್ಕಪಕ್ಕದ ಮನೆಯವರನ್ನು ಕರೆದಿದ್ದಾರೆ. ಬಳಿಕ ಬಾಗಿಲು ಒಡೆದು ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮಂಜುನಾಥರ ಮೃತದೇಹ ಪತ್ತೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಂಜುನಾಥ್ ಪತ್ನಿ ನೀಡಿರುವ ದೂರಿನ ಅನ್ವಯ ಪೊಲೀಸ್ ಸಿಬ್ಬಂದಿಯಾದ ಬಿಲ್ಲಾಳ್ ಮತ್ತು ಲಿಂಗೇಗೌಡ್ರು, ಸುದರ್ಶನ್, ವಿಶ್ವನಾಥ್ ವಿರುದ್ಧ ಪ್ರಕರಣ ದಾಖಲಾಗಿದೆ.
ಮಂಜುನಾಥ್ ರಿಗೆ ಪೊಲೀಸರು ಯಾವ ಕಾರಣಕ್ಕೆ ಥಳಿಸಿದ್ದಾರೆ ಎಂಬುದು ತಿಳಿದುಬಂದಿಲ್ಲ.







