ಬೆಳ್ತಂಗಡಿ: ಕೆಸರುಮಯವಾದ ಬಾಜಾರು-ನೆಲ್ಲಿಪಲಿಕೆ ಸಂಪರ್ಕ ರಸ್ತೆ
*ಗ್ರಾಪಂನಿಂದ ನಿರ್ಲಕ್ಷ್ಯ ಆರೋಪ: ಗ್ರಾಮಸ್ಥರಿಂದ ಪ್ರತಿಭಟನೆಯ ಎಚ್ಚರಿಕೆ

ಉಪ್ಪಿನಂಗಡಿ, ಜೂ.17: ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ವಾಡ್೯ ಸಂಖ್ಯೆ 3ರ ಬಾಜಾರು- ಗೊದಮುಗುಡ್ಡೆ- ನೆಲ್ಲಿಪಲಿಕೆ ಸಂಪರ್ಕ ರಸ್ತೆ ಸಂಪೂರ್ಣ ಹದಗಟ್ಟಿದ್ದು, ಮಳೆಯಿಂದಾಗಿ ಕೆಸರುಮಯವಾಗಿದೆ. ಇದರಿಂದ ಪಾದಚಾರಿಗಳು ಹಾಗೂ ವಾಹನ ಸವಾರರು ಸಂಚರಿಸಲು ಪರದಾಡುತ್ತಿದ್ದಾರೆ.
ಈ ರಸ್ತೆಯ ದುರವಸ್ಥೆ ಬಗ್ಗೆ ಗ್ರಾಮ ಪಂಚಾಯತ್‌ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪರಿಹಾರ ಆಗಿಲ್ಲ ಎನ್ನುತ್ತಾರೆ ಸ್ಥಳೀಯರು. ಕಳೆದ 13 ವರ್ಷಗಳಿಂದ ಈ ರಸ್ತೆ ಸಂಪೂರ್ಣ ಹದಗಟ್ಟಿದ್ದು, ಯಾವುದೇ ದುರಸ್ತಿ ಕಂಡಿಲ್ಲ. ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದ ಮಳೆ ನೀರು ರಸ್ತೆಯಲ್ಲಿ ನಿಂತು ಕೃತಕ ನೆರೆ ಉಂಟಾಗುತ್ತದೆ.
ಬಾಜಾರು ಸರಕಾರಿ ಶಾಲೆ ಮತ್ತು ಮದ್ರಸಗಳಿಗೆ ತೆರಳುವ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಎದ್ದುಬಿದ್ದು ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿಡಿದು ಸರ್ಕಸ್ ಮಾಡಿ ಸಂಚಾರ ಮಾಡಬೇಕಾಗಿದೆ. ಕೆಲವೊಮ್ಮೆ ದೊಡ್ಡ ವಾಹನಗಳು ಬಂತೆಂದರೆ ದ್ವಿಚಕ್ರ ಸವಾರರು ಕೆಸರಿನಲ್ಲಿ ಮಿಂದೆದ್ದು, ಹೋಗುವ ಪರಿಸ್ಥಿತಿ ಇದೆ ಎನ್ನುತ್ತಾರೆ ಇಲ್ಲಿನ ಸಾರ್ವಜನಿಕರು.
ಗ್ರಾಪಂ ಅಧ್ಯಕ್ಷ ಸಂಚರಿಸುವ ರಸ್ತೆ!: ವಿಶೇಷವೆಂದರೆ ಈ ರಸ್ತೆಯಲ್ಲಿ ದಿನನಿತ್ಯ ಸಂಚರಿಸುವವರ ಪೈಕಿ ಇಲ್ಲಿನ ಗ್ರಾಪಂ ಅಧ್ಯಕ್ಷ ಮತ್ತು ಕೆಲ ಸದಸ್ಯರು ಕೂಡಾ ಸೇರಿದ್ದಾರೆ. ಆದರೂ ಈ ರಸ್ತೆ ಯಾವುದೇ ದುರಸ್ತಿ ಕಾಣದೇ ಇರುವುದು ವಿಪರ್ಯಾಸವೇ ಸರಿ.
ಪ್ರತಿಭಟನೆಯ ಎಚ್ಚರಿಕೆ: ರಸ್ತೆ ಸಮಸ್ಯೆಯಿಂದ ಬೇಸತ್ತ ಇಲ್ಲಿನ ಸಾರ್ವಜನಿಕರು ಶನಿವಾರ ಗ್ರಾಪಂ ಅಧ್ಯಕ್ಷರಿಗೆ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನವಿ ಸಲ್ಲಿಸಿದ್ದಾರೆ. ಸೂಕ್ತ ಪರಿಹಾರ ಕಂಡುಕೊಳ್ಳಲು ವಿಫಲವಾದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಳೆದರಡು ವರ್ಷಗಳಿಂದ ಜಿಪಂ, ತಾಪಂ ಇಲ್ಲದ ಕಾರಣ ಗ್ರಾಪಂಗೆ ಅನುದಾನ ಲಭಿಸುತ್ತಿಲ್ಲ. ಈ ಕಾರಣದಿಂದ ರಸ್ತೆ ದುರಸ್ತಿ ವಿಳಂಬವಾಗಿದೆ. ಈಗಾಗಲೇ ಗ್ರಾಪಂ ಅನುದಾನದಿಂದ ಚರಂಡಿಯ ತುರ್ತು ಕಾಮಗಾರಿ ಶುಕ್ರವಾರ ಸಂಜೆಯಿಂದಲೇ ಆರಂಭಿಸಿದ್ದೇವೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು.
-ಅಬ್ದುರ್ರಝಾಕ್ ತೆಕ್ಕಾರು, ಅಧ್ಯಕ್ಷರು ಗ್ರಾಪಂ ತೆಕ್ಕಾರು
ಸಣ್ಣ ಮಳೆ ಬಂದರೂ ಬಾಜಾರು-ನೆಲ್ಲಿಪಲಿಕೆ ರಸ್ತೆಯಲ್ಲಿ ಸಾರ್ವಜನಿಕರು ಮತ್ತು ಮಕ್ಕಳು ಸಂಚಾರ ಮಾಡುವುದೇ ಕಷ್ಟವಾಗಿದೆ. ಈ ಬಗ್ಗೆ ಗ್ರಾಪಂ ಅಧಿಕಾರಿಗಳು ಕಾಳಜಿ ವಹಿಸಿ ದುರಸ್ತಿಗೆ ಕ್ರಮ ವಹಿಸಲು ಮುಂದಾಗಬೇಕು.
-ಇಲ್ಯಾಸ್, ಬಾಜಾರು ನಿವಾಸಿ
ಮಳೆಗಾಲದಲ್ಲಿ ನೀರು ರಸ್ತೆಗಳ ಮೇಲೆ ನಿಲ್ಲದೆ ಹರಿದು ಹೋಗುವ ವ್ಯವಸ್ಥೆಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಿದ್ದರೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿಬೇಕು.
-ರಹೀಂ, ಗೊದಮುಗುಡ್ಡೆ ನಿವಾಸಿ