ರಾಜ್ಯ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ: ಬಿಜೆಪಿ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಕರ್ನಾಟಕ ರಾಜ್ಯ ಸರ್ಕಾರವು ಕೈಗೊಂಡ ಮತಾಂತರ, ಎಪಿಎಂಸಿ, ಪಠ್ಯ ಪುಸ್ತಕ ಈ ಮೂರು ನಿರ್ಧಾರಗಳು ಖಂಡನೀಯವಾಗಿದ್ದು ಇದನ್ನು ರಾಜ್ಯ ಕಾಂಗ್ರೆಸ್ ಸರಕಾರ ಹಿಂಪಡೆಯದಿದ್ದರೆ ಇದರ ವಿರುದ್ಧ ಹೋರಾಟ ನಡೆಸಲು ಸಿದ್ದರಿದ್ದೇವೆ ಎಂದು ಬಂಟ್ವಾಳ ಶಾಸಕ ಹಾಗೂ ಬಿಜೆಪಿ ನಾಯಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಮಿಷ , ಬೆದರಿಕೆ ಒಡ್ಡಿ ಬಲಾತ್ಕಾರವಾಗಿ ಮತಾಂತರ ಮಾಡುವ ಕಾರ್ಯ ನಡೆದಾಗ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗಬಹುದು. ಕಾಯ್ದೆ ರದ್ದುಪಡಿಸಿದ ಪರಿಣಾಮವಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗುತ್ತದೆ. ಕಾಂಗ್ರೆಸ್ ನ ದ್ವೇಷದ ರಾಜಕಾರಣವನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದರು.
ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ರೈತರು ಬೆಳೆದ ಬೆಳೆಗಳನ್ನು ಎಲ್ಲಾ ಕಡೆ ಮುಕ್ತ ಮಾರಾಟ ಮಾಡುವ ಅವಕಾಶವನ್ನು ತಡೆಯುವ ಮೂಲಕ ರೈತರಿಗೆ ಅನ್ಯಾಯ ವೆಸಗಿದೆ, ಪಠ್ಯ ಪುಸ್ತಕದಲ್ಲಿ ಅಳವಡಿಸಲಾಗಿದ್ದ ಸಾರ್ವಕರ್, ಹಾಗೂ ಹೆಡ್ಗೇವಾರ್ ಅವರ ವಿಷಯಗಳನ್ನು ತೆಗೆದುಹಾಕುವ ಮೂಲಕ ರಾಜ್ಯ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ರವೀಶ್ ಶೆಟ್ಟಿ ಕರ್ಕಳ, ಡೊಂಬಯ್ಯ ಅರಳ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಪ್ರಮುಖರಾದ ಪುರುಷೋತ್ತಮ ಶೆಟ್ಟಿ ವಾಮದಪದವು, ರಮಾನಾಥ ರಾಯಿ, ಚಿದಾನಂದ ರೈ ಕಕ್ಯಪದವು, ಕಿಶೋರ್ ಪಲ್ಲಿಪಾಡಿ,ಮೋಹನ್ ಪಿ.ಎಸ್, ಯಶೋಧರ ಕರ್ಬೆಟ್ಟು, ಆನಂದ ಶಂಭೂರು, ಸೀತರಾಮ ಪೂಜಾರಿ, ಶಿವಪ್ರಸಾದ್ ಶೆಟ್ಟಿ, ಚಂದ್ರಕಲಾ ಮತ್ತಿತರರು ಉಪಸ್ಥಿತರಿದ್ದರು.