ದ.ಕ. ಜಿಲ್ಲೆಯಲ್ಲಿ ದೂರವಾದ ಮಳೆ: ಮೋಡ ಕವಿದ ವಾತಾವರಣ

ಮಂಗಳೂರು, ಜೂ.17: ದ.ಕ.ಜಿಲ್ಲೆಯಲ್ಲಿ ಶನಿವಾರ ಮಳೆ ದೂರವಾಗಿದ್ದು, ಮೋಡ ಕವಿದ ವಾತಾವರಣ ಕಂಡು ಬಂದಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮೋಡ ಸಹಿತ ಸಾಧಾರಣ ಬಿಸಿಲಿನ ವಾತಾವರಣವಿತ್ತು. ಮಧ್ಯಾಹ್ನದ ವೇಳೆ ಬೆಳ್ತಂಗಡಿ, ಸುಳ್ಯ, ಉಪ್ಪಿನಂಗಡಿ ಮತ್ತಿತರ ಕಡೆಗಳಲ್ಲಿ ಮಳೆಹನಿಯಾಗಿದೆ.
ಚಂಡಮಾರುತದ ಪರಿಣಾಮ ಮುಂಗಾರು ಮತ್ತಷ್ಟು ದುರ್ಬಲಗೊಂಡಿದ್ದು, ಜೂನ್ 22ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಉತ್ತರ ಒಳನಾಡು ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಶನಿವಾರ ಸರಾಸರಿ 32.1 ಡಿಗ್ರಿ ಗರಿಷ್ಠ, 25.3 ಕನಿಷ್ಟ ಉಷ್ಣಾಂಶ ದಾಖಲಾಗಿದೆ. ಶನಿವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ 4.1 ಮಿ.ಮಿ, ಸಿದ್ದಾಪುರ 19.8 ಮಿ.ಮಿ, ಕೊಲ್ಲೂರು 9.1 ಮಿ.ಮಿ, ಪಣಂಬೂರು 2.1 ಮಿ.ಮಿ, ಧರ್ಮಸ್ಥಳ 6.2 ಮಿ.ಮಿ, ಸುಳ್ಯ 5.2 ಮಿ.ಮಿ, ಪುತ್ತೂರು 2.7 ಮಿ.ಮಿ ಮಳೆ ದಾಖಲಾಗಿದೆ.
ಶನಿವಾರವೂ ಕಡಲಬ್ಬರ ತಗ್ಗಿವೆ. ಆದರೂ ಮುಂದಿನ 24 ಗಂಟೆಗಳಲ್ಲಿ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40 ಕಿ.ಮೀ.ನಿಂದ 45 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.