‘ಸಂಚಾರ ಸಂಪರ್ಕ ದಿವಸ’ ಕಾರ್ಯಕ್ರಮದಲ್ಲಿ ಪ್ರತಿಧ್ವನಿಸಿದ ಸಂಚಾರ ಸಮಸ್ಯೆಗಳು

ಮಂಗಳೂರು: ಮಂಗಳೂರು ನಗರ ಸಂಚಾರ ಪೊಲೀಸ್ ವತಿಯಿಂದ ನಗರದ ಕದ್ರಿಯ ಲಯನ್ಸ್ ಅಶೋಕ ಸೇವಾ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಸಂಚಾರ ಸಂಪರ್ಕ ದಿವಸ’ ಕಾರ್ಯಕ್ರಮದಲ್ಲಿ ಸಂಚಾರ ಸಮಸ್ಯೆಗಳು ಪ್ರತಿಧ್ವನಿಸಿದವು.
ನಗರದಲ್ಲಿ ದಿನದಿಂದ ದಿನಕ್ಕೆ ವಾಹನ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗುತ್ತಿವೆ. ಪಾರ್ಕಿಂಗ್‌ಗೆ ಮೀಸಲಿಟ್ಟಿರುವ ಸ್ಥಳಗಳ ನೀಲನಕಾಶೆಯನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಗಲಗೊಂಡಿರುವ ರಸ್ತೆಗಳ ಇಕ್ಕೆಲಗಳಲ್ಲಿ, ಪುಟ್‌ಪಾತ್‌ಗಳಲ್ಲಿ ವಾಹನ ಪಾರ್ಕಿಂಗ್ ಮಾಡಲಾಗುತ್ತಿದೆ. ಪಾರ್ಕಿಂಗ್‌ಗೆ ಮೀಸಲಿಟ್ಟ ವಾಣಿಜ್ಯ ಕಟ್ಟಡಗಳ ತಳ ಅಂತಸ್ತುಗಳು ಪಾರ್ಕಿಂಗ್‌ಗೆ ಲಭ್ಯವಿಲ್ಲ. ಕೆಲವು ಪ್ರತಿಷ್ಠಿತ ಹೊಟೇಲ್‌ಗಳಿಗೂ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಆಸ್ಪತ್ರೆಗಳಿಗೆ ಬರುವ ರೋಗಿಗಳ ವಾಹನಗಳನ್ನು ನಿಲ್ಲಿಸಲು ಜಾಗವಿಲ್ಲ. ಅನಧಿಕೃತ ಆಟೋರಿಕ್ಷಾ ನಿಲ್ದಾಣಗಳು ಕೂಡ ನಗರದಲ್ಲಿ ಹೆಚ್ಚಿವೆ ಎಂಬ ದೂರುಗಳು ಕೇಳಿ ಬಂದವು.
ವಾಣಿಜ್ಯ ಕಟ್ಟಡಗಳ ಎದುರಿನ ಸಾರ್ವಜನಿಕ ಸ್ಥಳಗಳಲ್ಲಿ ಅವರ ಗ್ರಾಹಕರಿಗೆ ಮಾತ್ರ ಪಾರ್ಕಿಂಗ್ ಅವಕಾಶ ಎಂಬುದಾಗಿ ಬೋರ್ಡ್ ಹಾಕಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ನಗರದ ಎಲ್ಲೆಲ್ಲಿ ಪಾರ್ಕಿಂಗ್ ಲಭ್ಯವಿದೆ ಎಂಬ ಬಗ್ಗೆ ಸಾರ್ವಜನಿಕರಿಗೆ ಬ್ಲೂ ಪ್ರಿಂಟ್ ನೀಡಿ ಎಂದು ಅಲೆಕ್ಸಾಂಡರ್ ಎಂಬವರು ಆಗ್ರಹಿಸಿದರು. ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ ಮಾಡುವ ವಾಹನಗಳಿಗೆ ವ್ಹೀಲ್ ಕ್ಲ್ಯಾಂಪ್ ಹಾಕಬೇಕು, ಪೇ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ಜಿ.ಕೆ.ಭಟ್ ಸಲಹೆ ನೀಡಿದರು.
ಕೆಲವೆಡೆ ಅನಧಿಕೃತವಾಗಿ ಆಟೊ ರಿಕ್ಷಾಗಳನ್ನು ಪಾರ್ಕಿಂಗ್ ಮಾಡಲಾಗುತ್ತಿದೆ. ನಿಲ್ದಾಣಗಳಲ್ಲಿ ನಿಗದಿಗಿಂತ ಹೆಚ್ಚು ಆಟೋರಿಕ್ಷಾ ನಿಲುಗಡೆ ಮಾಡುವುದರಿಂದ ಇತರ ವಾಹನಗಳ ಪಾರ್ಕಿಂಗ್‌ಗೆ ಸಮಸ್ಯೆಯಾಗಿದೆ ಎಂದು ಹನುಮಂತ ಕಾಮತ್ ದೂರಿದರು.
ಸಾರ್ವಜನಿಕರ ಅಹವಾಲುಗಳಿಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ಯಾವುದೇ ಕಟ್ಟಡದ ಎದುರು ಇರುವ ಸಾರ್ವಜನಿಕ ಸ್ಥಳದಲ್ಲಿ ಆ ಕಟ್ಟಡಕ್ಕೆ ಬರುವ ಗ್ರಾಹಕರಿಗೆ ಮಾತ್ರ ಪಾರ್ಕಿಂಗ್‌ಗೆ ಮೀಸಲಿಟ್ಟು ಬೋರ್ಡ್ ಹಾಕಲು ಅವಕಾಶವಿಲ್ಲ. ಪಾರ್ಕಿಂಗ್ ವ್ಯವಸ್ಥೆ ಸಂಬಂಧ ಖಾಸಗಿ ಆಸ್ಪತ್ರೆಯವರೊಂದಿಗೆ ಸಭೆ ನಡೆಸಲಾಗುವುದು. ವ್ಹೀಲ್ ಕ್ಲ್ಯಾಂಪ್‌ನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ವಾಣಿಜ್ಯ ಕಟ್ಟಡಗಳು, ಶಾಲೆಗಳ ಭದ್ರತಾ ಸಿಬ್ಬಂದಿಯು ಕಟ್ಟಡದ ಸಮೀಪ ಪಾರ್ಕಿಂಗ್, ಸಂಚಾರ ಅವ್ಯವಸ್ಥೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗುವುದು ಎಂದರು.
ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ ಪೊಲೀಸರಿಂದ ಸಾಧ್ಯವಿಲ್ಲ. ಸುಧಾರಣೆಗೆ ಗರಿಷ್ಠ ಪ್ರಯತ್ನ ನಡೆಸಲಾಗುವುದು. ಪಾಲಿಕೆಗೆ ಸಂಬಂಧಿಸಿದ ವಿಚಾರಗಳನ್ನು ಪಾಲಿಕೆಯವರಿಗೆ ತಿಳಿಸಲಾಗುವುದು ಎಂದು ಕುಲದೀಪ್ ಕುಮಾರ್ ಜೈನ್ ಹೇಳಿದರು.
ಕೆಪಿಟಿ ಮತ್ತು ನಂತೂರಿನಲ್ಲಿ ವೆಹಿಕಲ್ ಓವರ್‌ಪಾಸ್ ನಿರ್ಮಾಣ ಕಾಮಗಾರಿಗಳು ಮಳೆಗಾಲದ ಅನಂತರ ಆರಂಭಗೊಳ್ಳಲಿವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿದೇರ್ಶಕ ಅಬ್ದುಲ್ಲಾ ಜಾವೇದ್ ಅಜ್ಮಿ ಸಭೆಗೆ ಮಾಹಿತಿ ನೀಡಿದರು.
ನಗರದ ಸರ್ವಿಸ್ ಮತ್ತು ಸಿಟಿ ಬಸ್ ನಿಲ್ದಾಣದಲ್ಲಿ ಶೆಲ್ಟರ್ ಸಹಿತ ಮೂಲಭೂತ ಸೌಕರ್ಯಗಳ ಕೊರತೆ ಇರುವ ಬಗ್ಗೆ ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ ಗಮನ ಸೆಳೆದರು.
ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜೆರಿಸನ್ ಜಾರ್ಜ್, ಎನ್‌ಎಚ್‌ಎಐ ಅಧಿಕಾರಿ ಅನಿರುದ್ಧ್ ಕಾಮತ್, ಎಆರ್‌ಟಿಒ ವಿಶ್ವನಾಥ್ ನಾಯಕ್ ಉಪಸ್ಥಿತರಿದ್ದರು.
ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಬಿ.ಪಿ.ದಿನೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಾಫಿಕ್ ಇನ್‌ಸ್ಪೆಕ್ಟರ್ ಗೋಪಾಲಕೃಷ್ಣ ಭಟ್ ವಂದಿಸಿದರು.
ಪೊಲೀಸರು ಅಲ್ಲಲ್ಲಿ ವಾಹನಗಳನ್ನು ತಡೆದು ತಪಾಸಣೆ ನಡೆಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾ ಗುತ್ತದೆ. ಅದರ ಬದಲು ತಿಂಗಳಲ್ಲಿ ಒಂದು ಬಾರಿ ನಿರ್ದಿಷ್ಟ ದಿನ ಎಲ್ಲ ರೀತಿಯ ದಾಖಲೆಗಳನ್ನು ಪರಿಶೀಲಿಸಿ ವಾಹನಕ್ಕೆ ಸ್ಟಿಕ್ಕರ್ ಅಳವಡಿಸುವ ವ್ಯವಸ್ಥೆ ಜಾರಿಗೆ ತರುವುದು ಸೂಕ್ತ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕುಂಪಲ ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ‘ಎಎಸ್ಸೈ ಎಸ್ಸೈ ಅವರಿಗಿಂತ ಮೇಲಿನ ದರ್ಜೆಯ ಅಧಿಕಾರಿಗಳು ಮಾತ್ರ ತಪಾಸಣೆಗಾಗಿ ವಾಹನ ನಿಲ್ಲಿಸಬಹುದು ಅಥವಾ ವಯರ್‌ಲೆಸ್‌ನಲ್ಲಿ ಬಂದ ಸಂದೇಶದಂತೆ ಇತರ ಸಿಬ್ಬಂದಿ ತಪಾಸಣೆ ನಡೆಸಬಹುದು. ಆದರೆ ಬಾಡಿ ವೋರ್ನ್ ಕ್ಯಾಮರಾಗಳು ಇಲ್ಲದೆ ತಪಾಸಣೆ ನಡೆಸುವಂತಿಲ್ಲ. ಹೆಲ್ಮೆಟ್ ಧರಿಸದಿರುವುದು ಮತ್ತಿತರ ಪ್ರತ್ಯಕ್ಷವಾಗಿ ಕಾಣುವ ಸಂಚಾರ ನಿಯಮ ಉಲ್ಲಂಘನೆ ಹೊರತುಪಡಿಸಿ ಇತರ ಕಾರಣಕ್ಕೆ ವಾಹನ ನಿಲ್ಲಿಸದಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.