ದುಷ್ಕರ್ಮಿಗಳಿಂದ ಕೊಲೆಗೀಡಾದ ನಾಲ್ವರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸರಕಾರಕ್ಕೆ ಸೆಂಟ್ರಲ್ ಕಮಿಟಿ ಅಭಿನಂದನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಭಾವನೆಯಿಂದ ದುಷ್ಕರ್ಮಿಗಳಿಂದ ಕೊಲೆಗೀಡಾದ ಬೆಳ್ಳಾರೆಯ ಮಸೂದ್, ಮಂಗಳಪೇಟೆಯ ಮೊಹಮ್ಮದ್ ಫಾಝೀಲ್, ಕಾಟಿಪಳ್ಳದ ಅಬ್ದುಲ್ ಜಲೀಲ್ ಹಾಗೂ ದೀಪಕ್ ರಾವ್ ಎಂಬವರ ಕುಟುಂಬಕ್ಕೆ ಕರ್ನಾಟಕ ಸರಕಾರವು ತಲಾ ತಲಾ 25 ಲಕ್ಷ ರೂ. ಪರಿಹಾರವನ್ನು ಘೋಷಿಸಿರುವುದು ಬಹಳ ಸಂತಸದ ವಿಚಾರ ಎಂದು ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್‌ಹಾಜ್ ಕೆ.ಎಸ್.ಮೊಹಮ್ಮದ್ ಮಸೂದ್ ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿಯ ತಾರತಮ್ಯ ನೀತಿಯಿಂದಾಗಿ ಈ ಕುಟುಂಬಗಳಿಗೆ ಬಹಳ ಅನ್ಯಾಯವಾಗಿತ್ತು. ಇದನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸರಕಾರವು ಪರಿಹಾರ ಘೋಷಿಸಿ ನ್ಯಾಯ ಪಾಲಿಸಿರುವುದು ಬಹಳ ಉತ್ತಮ ಹೆಜ್ಜೆಯಾಗಿರುತ್ತದೆ. ಇದಕ್ಕಾಗಿ ಮುಸ್ಲಿಂ ಸೆಂಟ್ರಲ್ ಕಮಿಟಿಯು ಅಭಿನಂದನೆ ಸಲ್ಲಿಸಿದೆ ಎಂದು ಅವರು ಹೇಳಿದ್ದಾರೆ.
ಸಂತ್ರಸ್ತ ನಾಲ್ವರ ಕುಟುಂಬಗಳಿಗೆ ಪರಿಹಾರ ಕೊಡುವಂತೆ ಹಾಗೂ ಕುಟುಂಬದ ಒಬ್ಬ ಸದಸ್ಯನಿಗೆ ಸರಕಾರಿ ಹುದ್ದೆಯನ್ನು ಕೊಡಬೇಕೆಂದು ತಾನು ಈ ಮೊದಲು ಬೇಡಿಕೆ ಇಟ್ಟಿದ್ದೆ. ಅದುದರಿಂದ ನಾಲ್ಕು ಕುಟುಂಬದ ಒಬ್ಬ ಸದಸ್ಯನಿಗೆ ಸರಕಾರಿ ನೌಕರಿ ಕೊಡಬೇಕೆಂದು ಮಗದೊಮ್ಮೆ ಸರಕಾರಕ್ಕೆ ಮನವಿ ಮಾಡುವುದಾಗಿ ಮೊಹಮ್ಮದ್ ಮಸೂದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.