ಹಾಫಿಝ್ ವಿದ್ಯಾರ್ಥಿಗೆ ನೀಟ್‌ನಲ್ಲಿ 645 ಅಂಕ: ಪುತ್ತೂರು ಕಮ್ಯೂನಿಟಿ ಸೆಂಟರ್‌ನ 10 ಮಂದಿಗೆ ಎಂಬಿಬಿಎಸ್ ಅರ್ಹತಾ ಅಂಕ
ಮೆಲ್ಕಾರ್ ವಿಮೆನ್ಸ್ ಕಾಲೇಜಿನ ಕಳೆದ ಬಾರಿಯ ಟಾಪರ್‌ಗೂ ಎಂಬಿಬಿಎಸ್ ಅರ್ಹತೆ

ಪುತ್ತೂರು: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಪುತ್ತೂರು ಕಮ್ಯೂನಿಟಿ ಸೆಂಟರಿನ ಹತ್ತು ವಿದ್ಯಾರ್ಥಿಗಳಿಗೆ 2023ರ ನೀಟ್‌ನಲ್ಲಿ ಎಂಬಿಬಿಎಸ್‌ಗೆ ಅರ್ಹತಾ ಅಂಕ ಸಿಕ್ಕಿದೆ. ಇದರಲ್ಲಿ ಆರು ವಿದ್ಯಾರ್ಥಿಗಳು ಸೆಂಟರಿನ ರಿಜಿಸ್ಟರ್ಡ್ ವಿದ್ಯಾರ್ಥಿಗಳಾಗಿದ್ದರೆ, ಉಳಿದ ನಾಲ್ಕು ವಿದ್ಯಾರ್ಥಿಗಳು ಸೆಂಟರಿನಲ್ಲಿ ಕೌನ್ಸಿಲಿಂಗ್ ಮತ್ತು ಮೊನಿಟರಿಂಗ್ ವಿಭಾಗದಲ್ಲಿ ಇರುವ ವಿದ್ಯಾರ್ಥಿಗಳಾಗಿದ್ದಾರೆ.
ಕಮ್ಯೂನಿಟಿ ಸೆಂಟರ್ ಕಳೆದ ಬಾರಿ ಒಟ್ಟು 65 ವಿದ್ಯಾರ್ಥಿಗಳನ್ನು ಶಾಹೀನ್ ಬೀದರ್, ಪಾಲ್ಕನ್ ಬೆಂಗಳೂರು, ಬೈಜೂಸ್ ಆಕಾಶ್, ಬ್ರಿಲಿಯಂಟ್ ಪಾಲಾ, ಎಕ್ಸೆಲ್, ಆಳ್ವಾಸ್ ಮುಂತಾದ ಪ್ರತಿಷ್ಠಿತ ನೀಟ್ ಕೋಚಿಂಗ್ ಸೆಂಟರಿಗೆ ವಿದ್ಯಾರ್ಥಿಗಳನ್ನು ದಾಖಲಿಸಿತ್ತು. ಇವರ ಪೈಕಿ 10 ವಿದ್ಯಾರ್ಥಿಗಳು ಎಂ.ಬಿ.ಬಿ.ಎಸ್ ಗೆ ಅರ್ಹತಾ ಅಂಕ ಪಡೆದರೆ, ಉಳಿದ ವಿದ್ಯಾರ್ಥಿಗಳು ಬಿ.ಡಿ.ಎಸ್ ಮತ್ತು ಬಿ.ಇ.ಎಂ.ಎಸ್ ಪಡೆಯಲು ಅರ್ಹತೆ ಪಡೆದಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಸಹಕಾರ ಮತ್ತು ಸೌಲಭ್ಯ ಒದಗಿಸುತ್ತಿರುವ ಕಮ್ಯೂನಿಟಿ ಸೆಂಟರ್ ವಿದ್ಯಾರ್ಥಿಗಳೊಂದಿಗೆ ಮತ್ತು ಹೆತ್ತವರೊಂದಿಗೆ ಕೌನ್ಸಿಲಿಂಗ್ ನಡೆಸಿ, ಅವರ ಸಾಮರ್ಥ್ಯ ಪರೀಕ್ಷೆ ಮಾಡುತ್ತದೆ. ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ, ಅಂಕ, ಆಸಕ್ತಿ ಮತ್ತು ಕೌಶಲ್ಯವನ್ನು ಅರಿತು ಅವರನ್ನು ವಿವಿಧ ವೃತ್ತಿ ಪರ ಕ್ಷೇತ್ರಕ್ಕೆ ಆಯ್ಕೆ ಮಾಡಿ, ಗುರಿ ತಲುಪಲು ಬೇಕಾದ ಎಲ್ಲಾ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುತ್ತದೆ.
ಹಾಫಿಝ್ ವಿದ್ಯಾರ್ಥಿ ಮಹಮ್ಮದ್ ಬಿಲಾಲ್ ಅವರು ಶಾಹೀನ್ ಬೀದರ್ ನಲ್ಲಿ ಕಲಿತು ನೀಟ್ ನಲ್ಲಿ 645 ಅಂಕ ಪಡೆದರೆ, ಸೆಂಟರಿನ ಮೊನಿಟರಿಂಗ್ ನಲ್ಲಿ ಇರುವ ನಫೀಸಾ ಇಲ್ ಹಮ್ 650 ಅಂಕ ಪಡೆದಿದ್ದಾರೆ. ಕೌನ್ಸಿಲಿಂಗ್ ವಿಭಾಗದ ಮಝ್ವಾ 609 ಅಂಕ ಪಡೆದರೆ, ನಿಸ್ಮಾ 601 ಅಂಕ ಪಡೆದಿದ್ದಾರೆ. ನಸ್ವೀಫ್ 595 ಅಂಕ, ಅಮ್ನಾಝ್ 550, ಮೆಲ್ಕಾರ್ ವಿಮೆನ್ಸ್ ಕಾಲೇಜಿನ ಕಳೆದ ಬಾರಿಯ ಟಾಪರ್ ನಫೀಸಾ ಸಹಬಾ 544, ಸಾಬಿತ್ 530 ಅಂಕ ಪಡೆದಿದ್ದಾರೆ.
ಕಳೆದ ವರ್ಷ ಸೆಂಟರಿಗೆ 12 ಎಂ.ಬಿ.ಬಿ.ಎಸ್ ಸೀಟ್ ಸಿಕ್ಕಿದ್ದು ವಿದ್ಯಾರ್ಥಿಗಳು ವಿವಿಧ ಮೆಡಿಕಲ್ ಕಾಲೇಜಿನಲ್ಲಿ ಕಲಿಯುತ್ತಿದ್ದಾರೆ. ಈ ಬಾರಿ 10 ವಿದ್ಯಾರ್ಥಿಗಳಿಗೆ ಅರ್ಹತೆ ಸಿಕ್ಕಿದ್ದು, ಕೆಲವು ವಿದ್ಯಾರ್ಥಿಗಳು ನೀಟ್ ನಲ್ಲಿ ಅರ್ಹತಾ ಅಂಕ ಸಿಕ್ಕಿದರೂ ಎಂ.ಬಿ.ಬಿ.ಎಸ್ ಮಾಡಲು ಬೇಕಾದ ಆರ್ಥಿಕ ಶಕ್ತಿ ಇಲ್ಲದೇ ಸೆಂಟರನ್ನು ಸಂಪರ್ಕಿಸುತ್ತಿದ್ದಾರೆ. ಈಗಾಗಲೇ 2 ವಿದ್ಯಾರ್ಥಿಗಳನ್ನು ಸೆಂಟರ್ ಆಯ್ಕೆ ಮಾಡಿದ್ದು ಇನ್ನಷ್ಟೂ ವಿದ್ಯಾರ್ಥಿ ಗಳಿದ್ದರೂ ಸಂಪರ್ಕಿಸಲು ಕಮ್ಯೂನಿಟಿ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಫೌಂಡೇಶನ್ ನ ಅಧ್ಯಕ್ಷರಾದ ಅಮ್ಜದ್ ಖಾನ್ ತಿಳಿಸಿದ್ದಾರೆ.
ಈ ವರ್ಷ ಸೆಂಟರ್ 50 ವಿದ್ಯಾರ್ಥಿಗಳನ್ನು 2024ರ ನೀಟ್ ಬರೆಯಲು ತಯಾರುಗೊಳಿಸಿದ್ದು, ಅವರನ್ನು ವಿವಿಧ ಕೋಚಿಂಗ್ ಸೆಂಟರಿಗೆ ಸೇರಿಸಿದೆ. ಈ ಬಾರಿಯ ನೀಟ್ ನಲ್ಲಿ 350 ಅಂಕ ಹೆಚ್ಚು ಪಡೆದ ವಿದ್ಯಾರ್ಥಿಗಳಿಗೆ ಉಚಿತ ನೀಟ್ ತರಬೇತಿಯನ್ನು ಸಂಸ್ಥೆ ನೀಡಲಿದೆ. ಅದೇ ರೀತಿ 95% ಹೆಚ್ಚು ಪಿಯುಸಿ ಅಂಕ ಇರುವ ವಿದ್ಯಾರ್ಥಿಗಳೂ ಸಂಪರ್ಕಿಸಬಹುದು ಎಂದು ಸೆಂಟರಿನ ಅಧ್ಯಕ್ಷರಾದ ಅಮ್ಜದ್ ಖಾನ್ ತಿಳಿಸಿದ್ದಾರೆ.