ಚಕ್ರತೀರ್ಥ ಸಮಿತಿ ಪಠ್ಯ ಪರಿಷ್ಕರಣೆ ಕೈಬಿಟ್ಟು ಪ್ರೊ.ಬರಗೂರು ನೇತೃತ್ವದ ಸಮಿತಿ ರಚಿಸಿದ್ದ ಪಠ್ಯ ಬೋಧನೆಗೆ ಸೂಚನೆ
ಯಾವೆಲ್ಲ ಪಾಠಗಳಿಗೆ ಕತ್ತರಿ, ಹೊಸ ಸೇರ್ಪಡೆ ? ಇಲ್ಲಿದೆ ಮಾಹಿತಿ...

ಬೆಂಗಳೂರು, ಜೂ.17: ರಾಜ್ಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪರಿಷ್ಕರಣೆಗೊಂಡ ಪಠ್ಯವನ್ನು ಹಿಂಪಡೆದು, ಈ ಮೊದಲಿನಂತೆ ಪ್ರೊ.ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಪಠ್ಯ ಪರಿಷ್ಕರಣೆಯಂತೆ ಪಠ್ಯ ಕ್ರಮವನ್ನು ಬೋಧಿಸಲು ಕರ್ನಾಟಕ ಪಠ್ಯ ಪುಸ್ತಕ ಸಂಘವು ಶನಿವಾರ ತಿದ್ದೋಲೆಯನ್ನು ಪ್ರಕಟಿಸಿದೆ.
ಸರಕಾರದ ಆದೇಶದ ಮೇರೆಗೆ 2023-24ನೆ ಸಾಲಿಗೆ ಜಾರಿಯಲ್ಲಿರುವ ಪಠ್ಯ ಪುಸ್ತಕಗಳನ್ನು ಮಾರ್ಪಾಡು ಮಾಡಲಾಗಿದೆ. ವಿಷಯ ತಜ್ಞರು 6ರಿಂದ 10ನೆ ತರಗತಿಗಳ ಕನ್ನಡ ಭಾಷಾ ಪಠ್ಯಪುಸ್ತಕಗಳನ್ನು ಹಾಗೂ 6 ರಿಂದ 10ನೆ ತರಗತಿಗಳ ಸಮಾಜ ವಿಜ್ಞಾನ ಪಠ್ಯಪುಸ್ತಕಗಳನ್ನು ಪರಿಶೀಲಿಸಿ, ಕೆಲವು ಮಾರ್ಪಾಡುಗಳನ್ನು ಸೂಚಿಸಲಾಗಿದೆ.
ಅದರಂತೆ ಈ ಯಾವ ಪಠ್ಯವನ್ನು ತೆಗೆಯಲಾಗಿದೆ. ಯಾವ ಪಠ್ಯವನ್ನು ಸೇರಿಸಲಾಗಿದೆ ಎಂದು ತಿದ್ದೊಲೆಯ ರೂಪದಲ್ಲಿ ಸಿದ್ಧಪಡಿಸಿ, ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳಿಗೆ ನೀಡಲಾಗುವುದು. ಹಾಗೆಯೇ ತಿದ್ದೋಲೆಯ ಸಾಫ್ಟ್ ಪ್ರತಿಯನ್ನು ಕರ್ನಾಟಕ ಪಠ್ಯಪುಸ್ತಕ ಸಂಘದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ ಎಂದು ಸಂಘದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
6ನೆ ತರಗತಿಯ ಪ್ರಥಮ ಭಾಷೆ ಕನ್ನಡ ವಿಷಯದಲ್ಲಿ ನಿರ್ಮಲಾ ಸುರತ್ಕಲ್ ಬರೆದಿರುವ ‘ನಮ್ಮದೇನಿದೇ?’ ಪದ್ಯವನ್ನು ತೆಗೆದು, ಚೆನ್ನಣ್ಣ ವಾಲೀಕಾರ ಬರೆದಿರುವ ‘ನೀ ಹೋದ ಮರುದಿನ’ ಪದ್ಯವನ್ನು ಸೇರಿಸಲಾಗಿದೆ. 7ನೆ ತರಗತಿಯ ಪ್ರಥಮ ಭಾಷೆ ಕನ್ನಡ ವಿಷಯದಲ್ಲಿ ಪೂರಕ ಗದ್ಯವಾಗಿರುವ ರಮಾನಂದ ಆಚಾರ್ಯ ಬರೆದಿರುವ ‘ಸಾಮಾಜಿಕ ಕಳಕಳಿಯ ಮೊದಲ ಶಿಕ್ಷಕಿ’ ಬದಲಿಗೆ ಡಾ. ಎಚ್.ಎಸ್.ಅನುಪಮ ಬರೆದಿರುವ ‘ಸಾವಿತ್ರಿಬಾಯಿ ಫುಲೆ' ಪಠ್ಯವನ್ನು ಸೇರಿಸಲಾಗಿದೆ.
8ನೆ ತರಗತಿಯ ಪ್ರಥಮ ಭಾಷೆ ಕನ್ನಡ ವಿಷಯದಲ್ಲಿ ಪೂರಕ ಗದ್ಯವಾಗಿರುವ ಪಾರಂಪಳ್ಳಿ ನರಸಿಂಹ ಐತಾಳ ಬರೆದಿರುವ ‘ಭೂ ಕೈಲಾಸ' ಪೌರಾಣಿಕ ನಾಟಕ ಬದಲಿಗೆ ತಿ.ತಾ.ಶರ್ಮ ಅವರು ಅನುವಾದಿಸಿರುವ ಹಾಗೂ ನೆಹರು ಬರೆದಿರುವ `ಮಗಳಿಗೆ ಬರೆದ ಪತ್ರ' ಪಠ್ಯವನ್ನು ಸೇರಿಸಲಾಗಿದೆ.
10ನೆ ತರಗತಿಯ ಪ್ರಥಮ ಭಾಷೆ ಕನ್ನಡ ವಿಷಯದಲ್ಲಿ ಕೇಶವ ಬಲಿರಾಮ ಹೆಡಗೇವಾರ್ ಬರೆದ ‘ನಿಜವಾದ ಆದರ್ಶ ಪುರುಷಯಾರಾಗಬೇಕು?' ಬದಲಿಗೆ ‘ಸುಕುಮಾರ ಸಾಮಿಯ ಕಥೆ’ ಪಠ್ಯವನ್ನು ಸೇರಿಸಲಾಗಿದೆ. ಅದೇ ಪುಸ್ತಕದಲ್ಲಿ ಶತವಧಾನಿ ಡಾ.ಆರ್.ಗಣೇಶ್ ಅವರ ‘ಶ್ರೇಷ್ಠ ಭಾರತೀಯ ಚಿಂತನೆಗಳು’ ಬದಲಿಗೆ ಸಾ.ರಾ.ಅಬೂಬಕ್ಕರ್ ಅವರ ಪಠ್ಯವನ್ನು ಸೇರಿಸಲಾಗಿದೆ. ಅದೇ ಪುಸ್ತಕದಲ್ಲಿದ್ದ ಚಕ್ರವರ್ತಿ ಸೂಲಿಬೆಲೆ ಅವರ ‘ತಾಯಿ ಭಾರತೀಯ ಅಮರ ಪುತ್ರರು’ ಪಠ್ಯವನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ. ‘ವೀರಲವ’ ಪದ್ಯದ ಟಿಪ್ಪಣಿಯಲ್ಲಿ ವಾಲ್ಮೀಕಿ ಪರಿಚಯವನ್ನು ತಿದ್ದುಪಡಿ ಮಾಡಲಾಗಿದೆ.
8ನೆ ತರಗತಿಯ ದ್ವಿತೀಯ ಭಾಷೆ ಕನ್ನಡ ವಿಷಯದಲ್ಲಿ ಕೆ.ಟಿ. ಗಟ್ಟಿ ಬರೆದಿರುವ ‘ಕಾಲವನ್ನು ಗೆದ್ದವರು’ ಗದ್ಯವನ್ನು ಕೈ ಬಿಟ್ಟು, ವಿಜಯ ಮಾಲಾ ರಂಗನಾಥ್ ಅವರ ಬ್ಲಡ್ ಗ್ರೂಪ್ ಗದ್ಯವನ್ನು ಸೇರಿಸಲಾಗಿದೆ. 9ನೆ ತರಗತಿಯ ದ್ವಿತೀಯ ಭಾಷೆ ಕನ್ನಡ ವಿಷಯದಲ್ಲಿ ಅಚ್ಚರಿಯಜೀವಿ ಇಂಬಳ ಬದಲಿಗೆ ದಸ್ತಗೀರ ಅಲ್ಲೀಭಾಯಿ ಬರೆದಿರುವ ಉರುಸುಗಳಲ್ಲಿ ಭಾವೈಕ್ಯತೆ ಗದ್ಯವನ್ನು ಸೇರಿಸಲಾಗಿದೆ.
ಸಮಾಜ ವಿಜ್ಞಾನ ಪುಸ್ತಕವನ್ನು ಬದಲಾಯಿಸಿದ್ದು, ವೇದಕಾಲದ ಸಂಸ್ಕøತಿ, ಹೊಸ ಧರ್ಮಗಳ ಉದಯ ಪಠ್ಯಗಳನ್ನು ಮರುಸೇರ್ಪಡೆ ಮಾಡಲಾಗಿದೆ. ಮಾನವ ಹಕ್ಕುಗಳು ಎಂಬ ವಿಷಯಾಂಶವನ್ನು ಸೇರಿಸಲಾಗಿದೆ. ರಿಲಿಜನ್ ಬದಲಿಗೆ ಧರ್ಮ ಎಂಬ ಪದ ಬದಲಾವಣೆ ಮಾಡಲಾಗಿದೆ. ಮೈಸೂರು ಮತ್ತು ಇತರೆ ಸಂಸ್ಥಾನಗಳು ಅಧ್ಯಾಯದಲ್ಲಿ ಹಿಂದಿನ ಪಠ್ಯದಂತೆ ಮಮ್ಮುಡಿ ಕೃಷ್ಣರಾಜ ಒಡೆಯರ್‍ನಿಂದ ಹಿಡಿದು ಸರ್.ಮಿರ್ಜಾ ಇಸ್ಮಾಯಿಲ್ ವರೆಗೆ ಸೇರ್ಪಡೆ ಮಾಡಲಾಗಿದೆ.
ಮಹಿಳಾ ಸಮಾಜ ಸುಧಾರಕಿಯರ ವಿಷಯವನ್ನು ಸೇರಿಸಲಾಗಿದೆ. ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು ಎಂಬ ವಿಷಯಾಂಶವನ್ನು ಸೇರಿಸಲಾಗಿದೆ. ಭಾರತಿಕ್ಕಿರುವ ಸವಾಲುಗಳು ಹಾಗೂ ಪರಿಹಾರೋಪಾಯಗಳು ಅಧ್ಯಾಯದಲ್ಲಿ ಪ್ರಾದೇಶಿಕವಾದ ಎಂಬ ಉಪಶೀರ್ಷಿಕೆಗೆ ಸೇರಿಸಿದ್ದ ಪಠ್ಯದ ತುಣುಕನ್ನು ತೆಗೆಯಲಾಗಿದೆ. ಕಲಬುರ್ಗಿ ಕುರಿತು ಸಂವಿಧಾನದ ವಿಧಿ 371(ಜೆ) ಅಡಿ ನೀಡಿದ ವಿಶೇಷ ಸ್ಥಾನಮಾನವನ್ನು ಸೇರ್ಪಡೆ ಮಾಡಲಾಗಿದೆ.








