‘ಶಕ್ತಿ ಯೋಜನೆ’ಗೆ ಭಾರೀ ಸ್ಪಂದನೆ; ಎಲ್ಲೆಡೆಯೂ ಪ್ರವಾಸಿ ತಾಣ, ಧಾರ್ಮಿಕ ಸ್ಥಳಗಳು ಭರ್ತಿ

ಬೆಂಗಳೂರು, ಜೂ. 17: ರಾಜ್ಯದ ಕಾಂಗ್ರೆಸ್ ಸರಕಾರ ಮಹಿಳೆಯರಿಗೆ ‘ಶಕ್ತಿ ಯೋಜನೆ’ ಜಾರಿಗೊಳಿಸಿದ ಎರಡನೆ ವಾರಕ್ಕೆ ಕಾಲಿಟ್ಟಿದ್ದು, ಜೂ.17ರ ಶನಿವಾರ ದಿನದಂದು ರಾಜ್ಯದೆಲ್ಲೆಡೆಯ ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರ ದಂಡೇ ಹರಿದುಬಂದಿದ್ದು, ಎತ್ತ ನೋಡಿದರೂ ಸರಕಾರಿ ಬಸ್‍ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ.
ಎರಡು ದಿನ ರಜಾ ದಿನವಾಗಿರುವ ಹಿನ್ನೆಲೆ ಶನಿವಾರ ಮುಂಜಾನೆಯೇ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುವ ಎಲ್ಲ ಬಸ್‍ಗಳು ತುಂಬಿ ತುಳುಕುತ್ತಿದ್ದವು. ಅದರಲ್ಲೂ ಉತ್ತರ ಕರ್ನಾಟಕ ಭಾಗದಿಂದ ಹೆಚ್ಚು ಮಹಿಳೆಯರು ಧರ್ಮಸ್ಥಳ ಶ್ರೀ ಮಂಜುನಾಥನ ದರ್ಶನಕ್ಕೆ ಸಾಗರೋಪಾದಿಯಲ್ಲಿ ಬರುತ್ತಿರುವ ದೃಶ್ಯ ಕಂಡಿತು. ಜತೆಗೆ, ಮೈಸೂರು, ಕೋಲಾರ, ತುಮಕೂರು ಭಾಗದಿಂದಲೂ ಮಹಿಳಾ ಭಕ್ತರು ಬಂದಿದ್ದು, ಇದೀಗ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಎಲ್ಲಿ ನೋಡಿದರೂ ಮಹಿಳಾ ಭಕ್ತರೇ ಕಾಣಿಸುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅದೇ ರೀತಿ, ಹೊರನಾಡು, ಹಂಪಿ, ಮೈಸೂರು, ಬೇಲೂರು, ಹಾಸನ, ಉಡುಪಿ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಮಹಿಳೆಯರ ಆಗಮನ ಹೆಚ್ಚಾಗಿತ್ತು. ರಾಜ್ಯದ ಬಹುತೇಕ ಕಡೆಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದ ದೃಶ್ಯ ಕಂಡು ಬಂತು.
ಮತ್ತೊಂದೆಡೆ ಬಾಗಲಕೋಟೆ, ಗದಗ, ಕಲಬುರ್ಗಿ, ಚಿತ್ರದುರ್ಗ ಸೇರಿ ಕೆಲವೆಡೆ ಬಸ್ಸಿನ ಆಸನಗಳು ತುಂಬಿ ಬಸ್ಸಿನ ಬಾಗಿಲ ಬಳಿ ಜೋತುಬಿದ್ದು, ಮಹಿಳೆಯರು ಪ್ರಯಾಣಿಸಿದರು. ಇಷ್ಟು ದಿವಸ ಬಸ್ಸಿನಲ್ಲಿ ಆಸನಗಳನ್ನು ಹಿಡಿಯಲು ಕಿಟಕಿ ಮೂಲಕ ಕರವಸ್ತ್ರ ಹಾಕುತ್ತಿದ್ದ ಮಹಿಳೆಯರು, ಸೀಟ್ ಮೇಲಿದ್ದ ಕರವಸ್ತ್ರ ತೆಗೆದು ಕೂತರೆ ಎನ್ನುವ ಕಾರಣಕ್ಕೆ ಬಸ್ಸಿನ ಕಿಟಕಿಯಿಂದ ಮಕ್ಕಳನ್ನೆ ಒಳಗೆ ಇಳಿಸಿ ಆಸನಗಳನ್ನು ಹಿಡಿಯಲು ಹರಸಾಹಸ ಪಡುತ್ತಿರುವುದು ಕಂಡಿತು.
ರಾಜ್ಯ ಸರಕಾರ ಉಚಿತ ಪ್ರಯಾಣವನ್ನು ಘೋಷಣೆ ಮಾಡಿದ್ದು, ಜೂ.11ನೆ ತಾರೀಖಿನಿಂದ ಅನುಷ್ಠಾನಗೊಂಡಿತು. ಈ ಮೂಲಕ ಮಹಿಳೆಯರು ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ವಿಭಾಗದ ಸಾರಿಗೆ ಬಸ್‍ಗಳಲ್ಲಿ ಷರತ್ತುಗಳಿಲ್ಲದೆ ಪ್ರಯಾಣಿಸಬಹುದಾಗಿದೆ.
ಬಸ್ ಸಂಖ್ಯೆ ಹೆಚ್ಚಳಕ್ಕೆ ಪಟ್ಟು..!: ಕೆಎಸ್ಸಾರ್ಟಿಸಿ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆ ಜಾರಿಗೆ ಬಂದ ಬೆನ್ನಲ್ಲೇ, ರಾಜ್ಯದ ಬಹುತೇಕ ಕಡೆಗಳಲ್ಲಿ ಹೆಚ್ಚುವರಿ ಬಸ್‍ಗಳಿಗೆ ಬೇಡಿಕೆಯ ಕೂಗು ಕೇಳಿಬರುತ್ತಿದೆ. ಒಂದು ವಾರದಿಂದ ಬಸ್‍ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲು ಪ್ರಯಾಣಿಕರು ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಪ್ರವಾಸೋದ್ಯಮಕ್ಕೆ ಆದಾಯ: ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನೆಲೆ ಪ್ರವಾಸಿ ತಾಣಗಳಿಗೆ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಜನರ ಆಗಮನ ಹೆಚ್ಚಾಗಿದ್ದು, ಇದರಿಂದ ಸ್ಥಳೀಯ ವ್ಯಾಪಾರ ಚಟುವಟಿಕೆಗಳು ಹೆಚ್ಚಾಗಿದೆ.ಜತೆಗೆ, ಪ್ರವಾಸಿ ತಾಣಗಳಿಗೆ ಟಿಕೆಟ್ ಮೀಸಲಿಟ್ಟಿರುವ ಕಾರಣ ಅಲ್ಲಿಂದ ಆದಾಯವೂ ಸರಕಾರಕ್ಕೆ ಸೇರುತ್ತಿದೆ.
ಮಹಿಳಾ ಪ್ರಯಾಣಿಕರ ಟಿಕೆಟ್ ದರ 12 ಕೋಟಿ ರೂ.: ಜೂ.16ರ ಮಧ್ಯರಾತ್ರಿಯಿಂದ ಒಂದೇ ದಿನದಲ್ಲಿ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ ಬರೋಬ್ಬರಿ 12.45 ಕೋಟಿ ರೂ.ದಾಟಿದೆ. ಕೆಎಸ್ಸಾರ್ಟಿಸಿಯಲ್ಲಿ 16,34,991, ಬಿಎಂಟಿಸಿಯಲ್ಲಿ 17,93,861, ವಾಕರಸಾ ಸಂಸ್ಥೆ 13,56,319 ಹಾಗೂ ಕಕರಸಾ ನಿಗಮ 7,24,599 ಸೇರಿದಂತೆ ಒಟ್ಟು 55.09ಲಕ್ಷಕ್ಕೂ ಅಧಿಕ ಮಹಿಳೆಯರು ಪ್ರಯಾಣಿಸಿದ್ದಾರೆ.







