ಉಗಾಂಡಾ ಶಾಲೆಯ ಮೇಲೆ ಉಗ್ರರ ದಾಳಿ: 37 ಮಕ್ಕಳ ಸಹಿತ 40 ಮಂದಿ ಮೃತ್ಯು, 6 ಮಕ್ಕಳ ಅಪಹರಣ

ಕಂಪಾಲ: ಕಾಂಗೋ ಗಡಿಭಾಗದಲ್ಲಿರುವ ಉಗಾಂಡದ ಕಸೇಸೆ ಜಿಲ್ಲೆಯಲ್ಲಿ ಶಾಲೆಯೊಂದರ ಮೇಲೆ ಶಂಕಿತ ಬಂಡುಗೋರರು ನಡೆಸಿದ ದಾಳಿಯಲ್ಲಿ 38 ಮಕ್ಕಳ ಸಹಿತ ಕನಿಷ್ಟ 41 ಮಂದಿ ಮೃತಪಟ್ಟಿದ್ದು 8 ಮಂದಿ ಗಾಯಗೊಂಡಿದ್ದಾರೆ. ಇತರ 6 ಮಂದಿಯನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಹರಿತವಾದ ಆಯುಧದಿಂದ ಮಕ್ಕಳನ್ನು ಇರಿದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಶುಕ್ರವಾರ ರಾತ್ರಿ 11 ಗಂಟೆಗೆ ಈ ಕೃತ್ಯ ನಡೆಸಲಾಗಿದೆ. ಶಾಲೆಯ ಬಳಿಯಿದ್ದ ವಸತಿ ನಿಲಯಕ್ಕೆ ಬೆಂಕಿಹಚ್ಚಿದ್ದು ಹಲವು ಮೃತದೇಹಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ. ಶಾಲೆ ಹಾಗೂ ವಸತಿನಿಲಯದ ಬಗ್ಗೆ ಮಾಹಿತಿ ಇದ್ದವರೇ ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ. ದಾಂಧಲೆ ನಡೆಸಿದ ಬಳಿಕ 6 ಮಕ್ಕಳನ್ನು ಅಪಹರಿಸಲಾಗಿದೆ.
ಗಲಭೆಗ್ರಸ್ತ ಪೂರ್ವ ಕಾಂಗೋದಲ್ಲಿ ಹಲವು ವರ್ಷಗಳಿಂದ ನೆಲೆ ಕಂಡುಕೊಂಡಿರುವ ಅಲೈಡ್ ಡೆಮೊಕ್ರಾಟಿಕ್ ಪಡೆ(ಎಡಿಎಫ್)ಯ ಸದಸ್ಯರು ಶುಕ್ರವಾರ ಗಡಿಪ್ರದೇಶದ ಎಂಪೋಂಡ್ವೆ ನಗರದಲ್ಲಿನ ಲ್ಹುಬಿರಿಹಾ ಸೆಕೆಂಡರಿ ಶಾಲೆಯ ಮೇಲೆ ಆಕ್ರಮಣ ಮಾಡಿದ್ದಾರೆ. ದುಷ್ಕರ್ಮಿಗಳ ಗುಂಡೇಟಿಗೆ 38 ಮಕ್ಕಳು, ಒಬ್ಬ ಕಾವಲುಸಿಬಂದಿ ಹಾಗೂ ಇಬ್ಬರು ಸ್ಥಳೀಯರು ಬಲಿಯಾಗಿದ್ದಾರೆ ಎಂದು ನಗರದ ಮೇಯರ್ ಸಿಲ್ವರೆಸ್ಟ್ ಮಪೋಝ್ ಹೇಳಿದ್ದಾರೆ.
ಶಾಲೆಯ ಬಳಿಯಿದ್ದ ಹಾಸ್ಟೆಲ್ ಗೆ ಬೆಂಕಿ ಹಚ್ಚಲಾಗಿದ್ದು ಆಹಾರದ ಗೋದಾಮಿಗೆ ನುಗ್ಗಿ ಲೂಟಿ ಮಾಡಲಾಗಿದೆ. ಐಸಿಸ್ನೊಂದಿಗೆ ಸಂಪರ್ಕದಲ್ಲಿರುವ ಅಲೈಡ್ ಡೆಮೊಕ್ರಾಟಿಕ್ ಪಡೆ ಈ ದಾಳಿ ಎಸಗಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಹಲವರನ್ನು ಅಪಹರಿಸಲಾಗಿದ್ದು ಅಪಹೃತರಲ್ಲಿ ಶಾಲಾ ಮಕ್ಕಳೂ ಸೇರಿದ್ದಾರೆ. ಇದುವರೆಗೆ 25 ಮೃತದೇಹಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಕೆಲವು ಮೃತದೇಹಗಳನ್ನು ಉಗ್ರರು ಸುಟ್ಟುಹಾಕಿದ್ದಾರೆ. ಶಂಕಿತ ಉಗ್ರರು ಕಾಂಗೋದ ವಿರುಂಗ ನ್ಯಾಷನಲ್ ಪಾರ್ಕ್ ನಲ್ಲಿ ಅಡಗಿರುವ ಮಾಹಿತಿ ಲಭಿಸಿದ್ದು ಅಪಹೃತರ ಬಿಡುಗಡೆಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಸರಕಾರಿ ಅಧಿಕಾರಿಗಳು ಹೇಳಿದ್ದಾರೆ.
ಉಗ್ರರ ದಾಳಿಯಲ್ಲಿ ಮೃತಪಟ್ಟ ಮತ್ತು ಗಾಯಗೊಂಡವರ ಬಗ್ಗೆ, ಉಗ್ರರು ಎಷ್ಟು ಜನರನ್ನು ಅಪಹರಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಉಗಾಂಡ ಅಧ್ಯಕ್ಷರ ವಕ್ತಾರ ಜೋ ವಲುಸಿಂಬಿ ಹೇಳಿದ್ದಾರೆ.ದುಷೃತ್ಯ ಎಸಗಿದ ಬಳಿಕ ಬಂಡುಗೋರರು ಉಗಾಂಡಾ ಮತ್ತು ರವಾಂಡಾ ದೇಶಗಳ ಗಡಿಭಾಗಕ್ಕೆ ಹೊಂದಿಕೊಂಡಿರುವ ವಿರುಂಗಾ ಎಂಬ ದಟ್ಟ ಅರಣ್ಯದಲ್ಲಿ ತಲೆಮರೆಸಿಕೊಂಡಿದ್ದಾರೆ. ಮುಸ್ಲಿಂ ಉಗಾಂಡಾ ಬಂಡುಗೋರರು ಹೆಚ್ಚಿರುವ ಎಡಿಎಫ್ ಪೂರ್ವ ಕಾಂಗೋ ಗಣರಾಜ್ಯದಲ್ಲಿ 1990ರ ದಶಕದ ಬಳಿಕ ಪ್ರಬಲಗೊಂಡಿದೆ. ಐಸಿಸ್ ಜತೆ ಸಂಪರ್ಕ ಹೊಂದಿರುವ ಎಡಿಎಫ್ 2019ರಿಂದ ಹಲವು ದಾಳಿಗಳನ್ನು ನಡೆಸುತ್ತಿದೆ. ಆದರೆ ಶುಕ್ರವಾರ ನಡೆಸಿದ ದಾಳಿ ಇತ್ತೀಚಿನ ದಿನಗಳಲ್ಲಿನ ಅತ್ಯಂತ ಮಾರಣಾಂತಿಕ ದಾಳಿಗಳಲ್ಲಿ ಒಂದಾಗಿದೆ.
1988ರ ಜೂನ್ ನಲ್ಲಿ ಕಾಂಗೋ ಗಣರಾಜ್ಯದ ಗಡಿಭಾಗದ ಸನಿಹದಲ್ಲಿರುವ ಕಿಚ್ವಾಂಬ ತಾಂತ್ರಿಕ ಶಿಕ್ಷಣ ಸಂಸ್ಥೆಗೆ ಉಗ್ರರು ದಾಳಿ ನಡೆಸಿ 80 ವಿದ್ಯಾರ್ಥಿಗಳನ್ನು ಬೆಂಕಿಹಚ್ಚಿ ಕೊಂದು 100ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಅಪಹರಿಸಿದ್ದರು. ಎಡಿಎಫ್ ಬಂಡುಗೋರರನ್ನು ಹಿಮ್ಮೆಟ್ಟಿಸಲು 2021ರಿಂದ ಉಗಾಂಡಾ ಮತ್ತು ಕಾಂಗೋ ಗಣರಾಜ್ಯ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದರೂ ಇದುವರೆಗೆ ಫಲ ನೀಡಿಲ್ಲ. ಎಡಿಎಫ್ ಮುಖಂಡನ ಬಂಧನಕ್ಕೆ ನೆರವಾಗುವ ಮಾಹಿತಿ ಒದಗಿಸಿದವರಿಗೆ ಅಮೆರಿಕ 5 ದಶಲಕ್ಷ ಡಾಲರ್ ಬಹುಮಾನ ಘೋಷಿಸಿದೆ.
ಈ ಶಾಲೆ ಎಡಿಎಫ್ ನ ಪ್ರಾಬಲ್ಯವಿರುವ ಪ್ರದೇಶದ ಸುಮಾರು 2. ಕಿ.ಮೀ ವ್ಯಾಪ್ತಿಯಲ್ಲಿದೆ. ಶಾಲೆಯ ಸುತ್ತಮುತ್ತ ಕನಿಷ್ಟ 2 ದಿನದ ಹಿಂದೆ ಎಡಿಎಫ್ ಸದಸ್ಯರು ಸುಳಿದಾಡುತ್ತಿರುವ ಬಗ್ಗೆ ಗುಪ್ತಚರ ಮಾಹಿತಿ ಲಭಿಸಿತ್ತು. ಆದರೂ ಸೂಕ್ತ ಕ್ರಮ ಕೈಗೊಳ್ಳದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸೇನಾಧಿಕಾರಿ ಮೇಜರ್ ಜನರಲ್ ಡಿಕ್ ಒಲಮ್ರನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ದಾಳಿಕೋರರಿಗೆ ಶಾಲೆಯ ಬಗ್ಗೆ ಸಂಪೂರ್ಣ ಮಾಹಿತಿಯಿತ್ತು. ಬಾಲಕರು ಮತ್ತು ಬಾಲಕಿಯರು ಉಳಿದುಕೊಳ್ಳುತ್ತಿದ್ದ ಹಾಸ್ಟೆಲ್ ಯಾವುದು ಎಂಬುದು ಅವರಿಗೆ ತಿಳಿದಿತ್ತು. ಮೊದಲು ಬಾಲಕರ ವಸತಿ ನಿಲಯಕ್ಕೆ ದಾಳಿ ಮಾಡಿದ ಉಗ್ರರು, ಹೊರಗಿಂದ ಚಿಲಕ ಹಾಕಿ ಬಳಿಕ ಬೆಂಕಿಹಚ್ಚಿದ್ದಾರೆ. ಬಾಲಕರ ಕಿರುಚಾಟ ಕೇಳಿದ ಬಾಲಕಿಯರು ವಸತಿ ನಿಲಯದಿಂದ ಹೊರಗೆ ಓಡಿದಾಗ ಅವರನ್ನು ಬೆನ್ನಟ್ಟಿ ಉದ್ದವಾದ ಚೂರಿಯಿಂದ ದಾಳಿ ಮಾಡಲಾಗಿದೆ. ಬಳಿಕ 6 ಬಾಲಕಿಯರನ್ನು ಅಪಹರಿಸಿ ಕೊಂಡೊಯ್ದಿದ್ದಾರೆ. ಕೆಲವು ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟುಹೋಗಿರುವುದರಿಂದ ಡಿಎನ್ಎ ಪರೀಕ್ಷೆ ನಡೆಸಲಾಗುವುದು. ಅಪಹೃತರ ಬಿಡುಗಡೆ ಕಾರ್ಯಾಚರಣೆಗೆ ಅಗತ್ಯವಿರುವ ಹೆಚ್ಚುವರಿ ಭದ್ರತಾ ಪಡೆಯನ್ನು ರವಾನಿಸಲು ಕೋರಲಾಗಿದೆ ಎಂದವರು ಹೇಳಿದ್ದಾರೆ.