ಪಾಕ್ ಗೆ ಹಿಂತಿರುಗಿ ಪ್ರಧಾನಿಯಾಗಲು ನವಾಝ್ ಷರೀಫ್ ಗೆ ಸಹೋದರನ ಆಹ್ವಾನ

ಇಸ್ಲಮಾಬಾದ್: ಪಾಕಿಸ್ತಾನಕ್ಕೆ ಹಿಂತಿರುಗಿ ಬಂದು ದೇಶದ ಪ್ರಧಾನಿಯಾಗಿ 4ನೇ ಬಾರಿಗೆ ಅಧಿಕಾರ ಸ್ವೀಕರಿಸುವಂತೆ ಪಾಕ್ ಪ್ರಧಾನಿ ಶೆಹಬಾಝ್ ಷರೀಫ್ ತನ್ನ ಸಹೋದರ , ಮಾಜಿ ಪ್ರಧಾನಿ ನವಾಝ್ ಷರೀಫ್ ರನ್ನು ಆಹ್ವಾನಿಸಿದ್ದಾರೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.
ಪಕ್ಷದ ಕೇಂದ್ರ ಸಮಿತಿ ಸಭೆಯಲ್ಲಿ ಮಾತನಾಡಿದ ಶೆಹಬಾಝ್, ನವಾಝ್ ಷರೀಫ್ ಪಾಕಿಸ್ತಾನಕ್ಕೆ ಹಿಂದಿರುಗಿದರೆ ಪಿಎಂಎಲ್-ಎನ್ ಪಕ್ಷದ ಅಧ್ಯಕ್ಷತೆಯನ್ನು ಅವರಿಗೆ ಹಸ್ತಾಂತರಿಸುವುದಾಗಿ ಹೇಳಿದರು. ಅನಾರೋಗ್ಯದ ಕಾರಣದಿಂದ ನವಾಝ್ ಷರೀಫ್ 2019ರ ನವೆಂಬರ್ ನಿಂದ ಲಂಡನ್ ನಲ್ಲಿದ್ದಾರೆ. ಪನಾಮಾ ಪೇಪರ್ಸ್ ಪ್ರಕರಣದಲ್ಲಿ ನವಾಝ್ ಷರೀಫ್ ರನ್ನು ಸುಪ್ರೀಂಕೋರ್ಟ್ ಅನರ್ಹಗೊಳಿಸಿ, ಪಕ್ಷದ ಯಾವುದೇ ಹುದ್ದೆ ನಿರ್ವಹಿಸದಂತೆ ತಡೆ ನೀಡಿದ ಹಿನ್ನೆಲೆಯಲ್ಲಿ ಅವರು ಪಕ್ಷದ ಅಧ್ಯಕ್ಷತೆಯನ್ನು ಸಹೋದರ ಶೆಹಬಾಝ್ಗೆ ವಹಿಸಿದ್ದರು.
ಕೆಲವು ವಾರಗಳ ಹಿಂದೆ ಸುಪ್ರೀಂಕೋರ್ಟ್ ತೀರ್ಪಿನ ಮರುಪರಿಶೀಲನೆ ಕೋರಲು ಅವಕಾಶ ನೀಡುವ `ಸುಪ್ರೀಂಕೋರ್ಟ್ ರಿವ್ಯೂ ಆಫ್ ಜಡ್ಜ್ಮೆಂಟ್ ಆ್ಯಂಡ್ ಆರ್ಡರ್ಸ್ ಆ್ಯಕ್ಟ್'ಗೆ ಪಾಕ್ ಪ್ರಧಾನಿ ಆರಿಫ್ ಆಲ್ವಿ ಸಹಿ ಹಾಕಿದ್ದರು. ಇದೀಗ ನವಾಝ್ ಷರೀಫ್ ವಿರುದ್ಧದ ನಿಷೇಧವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲು ಪಕ್ಷ ನಿರ್ಧರಿಸಿದ್ದು ಅವರ ಮೇಲಿರುವ ನಿಷೇಧ ತೆರವಾಗುವ ನಿರೀಕ್ಷೆಯಲ್ಲಿದೆ.