ಬ್ರಿಟನ್: ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ; 105 ಮಂದಿ ಬಂಧನ

ಲಂಡನ್: ಅಕ್ರಮ ವಲಸಿಗರ ವಿರುದ್ಧ ದೇಶದಾದ್ಯಂತ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಕೂಡಾ ಜತೆಗೂಡಿದ್ದು ಈ ಕಾರ್ಯಾಚರಣೆಯಲ್ಲಿ 105 ವಿದೇಶೀ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಬುಲೆಟ್ಪ್ರೂಫ್ ಬಟ್ಟೆ ಧರಿಸಿದ್ದ ಸುನಾಕ್ ಉತ್ತರ ಲಂಡನ್ ನ ಬ್ರೆಂಟ್ ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಜತೆಗೂಡಿದರು. ದೇಶದಾದ್ಯಂತ ನಡೆದ ಕಾರ್ಯಾಚರಣೆಯಲ್ಲಿ 20 ದೇಶಗಳ 105 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ರೆಸ್ಟಾರೆಂಟ್ ಸೇರಿದಂತೆ ವಾಣಿಜ್ಯ ಮಳಿಗೆಗಳು, ಬಾರ್ ಗಳು, ಸೆಲೂನ್ ಗಳು ಹಾಗೂ ಸೂಪರ್ ಮಾರ್ಕೆಟ್ ಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ನಕಲಿ ದಾಖಲೆ ಪತ್ರದ ಮೂಲಕ ಇವರು ಕೆಲಸ ಮಾಡುತ್ತಿರುವುದು ದೃಢಪಟ್ಟಿದೆ. ಬಂಧಿತರಲ್ಲಿ 40ಕ್ಕೂ ಅಧಿಕ ಮಂದಿಯನ್ನು ಬ್ರಿಟನ್ನಿಂದ ಗಡೀಪಾರು ಪ್ರಕ್ರಿಯೆ ಕಾಯ್ದಿರಿಸಿ ಗೃಹ ಇಲಾಖೆ ಬಂಧಿಸಿದೆ. ಉಳಿದ ಶಂಕಿತರನ್ನು ವಲಸೆ ಜಾಮೀನಿನಡಿ ಬಿಡುಗಡೆಗೊಳಿಸಲಾಗಿದೆ. ಇವರನ್ನು ಬ್ರಿಟನ್ ನಿಂದ ಗಡೀಪಾರು ಮಾಡುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಕ್ರಮವಾಗಿ ಕೆಲಸ ಮಾಡುವುದರಿಂದ ನಮ್ಮ ಸಮುದಾಯಕ್ಕೆ ಹಾನಿಯಾಗುತ್ತದೆ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ನಮ್ಮ ಉದ್ಯೋಗಿಗಳನ್ನು ಕೆಲಸದಿಂದ ವಂಚಿತಗೊಳಿಸುತ್ತದೆ. ಇವರು ಯಾವುದೇ ತೆರಿಗೆ ಪಾವತಿಸದ ಕಾರಣ ಸಾರ್ವಜನಿಕರಿಗೂ ಮೋಸ ಎಸಗಿದಂತಾಗುತ್ತದೆ ಎಂದು ಬ್ರಿಟನ್ ನ ಗೃಹಕಾರ್ಯದರ್ಶಿ ಸುಯೆಲ್ಲಾ ಬ್ರವೆರ್ಮನ್ ಹೇಳಿದ್ದಾರೆ.