ಪಿಡಿಎಯಿಂದ ಬಿಜೆಪಿಯನ್ನು ಸೋಲಿಸಲು ಸಾಧ್ಯ: ಅಖಿಲೇಶ್
ಲಕ್ನೋ: 2024ರ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸುವ ಸೂತ್ರವೊಂದನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೊರಗೆಡವಿದ್ದಾರೆ. ಪಿಡಿಎ (ಪಿಚ್ಲೇ, ದಲಿತ್, ಅಲ್ಪಸಂಖ್ಯಾಖ್- ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರು) ಮೂಲಕ NDA ಯನ್ನು ಸೋಲಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಲಕ್ನೋದಲ್ಲಿ ನಡೆದ ಎನ್ಡಿಟಿವಿ ಸಮಾವೇಶದಲ್ಲಿ ಅವರು ಒಂದು ಪ್ರಶ್ನೆಗೆ ಈ ಉತ್ತರ ನೀಡಿದರು.
ಮುಂದಿನ ವರ್ಷ ನಡೆಯಲಿರುವ ಮಹಾಚುನಾವಣೆಗೆ ಪ್ರತಿಪಕ್ಷಗಳ ಮಹಾ ಒಕ್ಕೂಟವೊಂದು ಸಿದ್ಧಗೊಳ್ಳುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗಳಿಂದ ನುಣುಚಿಕೊಂಡ ಯಾದವ್, ಉತ್ತರಪ್ರದೇಶಕ್ಕೆ ನನ್ನ ಏಕೈಕ ಘೋಷಣೆಯೆಂದರೆ ‘‘ಡಿಫೀಟ್ 80, ರಿಮೂವ್ ಬಿಜೆಪಿ’’ ಎಂದರು.
‘‘ದೊಡ್ಡ ರಾಷ್ಟ್ರೀಯ ಪಕ್ಷಗಳು ನಮ್ಮನ್ನು ಬೆಂಬಲಿಸಿದರೆ, ಎಲ್ಲಾ 80 ಕ್ಷೇತ್ರಗಳಲ್ಲಿ ಬಿಜೆಪಿಯು ಸೋಲುತ್ತದೆ’’ ಎಂದು ಅಖಿಲೇಶ್ ಯಾದವ್ ಹೇಳಿದರು. ನಿರ್ದಿಷ್ಟ ರಾಜ್ಯದಲ್ಲಿ ಯಾವ ಭಾಗೀದಾರ ಪಕ್ಷವು ಬಲಿಷ್ಠವಾಗಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಸ್ಥಾನ ಹಂಚಿಕೆ ಮಾಡಬೇಕು ಎಂಬುದಾಗಿ ನಾನು ಯಾವತ್ತಿನಿಂದಲೂ ಹೇಳುತ್ತಿದ್ದೇನೆ’’ ಎಂದರು.