ಏಕೈಕ ಟೆಸ್ಟ್: ಅಫ್ಘಾನಿಸ್ತಾನದ ವಿರುದ್ಧ ಬಾಂಗ್ಲಾದೇಶ ಕ್ಕೆ 546 ರನ್ ಜಯ
ಸುಮಾರು 90 ವರ್ಷಗಳಲ್ಲಿ ಭಾರೀ ಅಂತರದ ಗೆಲುವು

ಢಾಕಾ: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯ ವನ್ನು 546 ರನ್ ಅಂತರದಿಂದ ಗೆದ್ದುಕೊಂಡಿರುವ ಬಾಂಗ್ಲಾದೇಶಮಹತ್ವದ ಸಾಧನೆ ಮಾಡಿದೆ. ಸುಮಾರು 90 ವರ್ಷಗಳಲ್ಲಿ ಬಾಂಗ್ಲಾದೇಶ ಭಾರೀ ಅಂತರದ ರನ್‌ನಿಂದ ಜಯ ಸಾಧಿಸಿದ ತಂಡವೆಂಬ ಹಿರಿಮೆಗೆ ಪಾತ್ರವಾಗಿದೆ. ಇದು ಪಂದ್ಯದಲ್ಲಿ ಬಾಂಗ್ಲಾದ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೂರನೇ ಅತ್ಯಂತ ದೊಡ್ಡ ರನ್ ಅಂತರದಿಂದ ಬಾಂಗ್ಲಾದೇಶ ಜಯಭೇರಿ ಬಾರಿಸಿದೆ. 1928ರಲ್ಲಿ ಇಂಗ್ಲೆಂಡ್ ತಂಡ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯವನ್ನು 675 ರನ್‌ನಿಂದ ಮಣಿಸಿದ್ದರೆ, 6 ವರ್ಷಗಳ ನಂತರ ದಿ ಓವಲ್‌ನಲ್ಲಿ ಆಸ್ಟ್ರೇಲಿಯವು ಇಂಗ್ಲೆಂಡ್ ತಂಡವನ್ನು 562 ರನ್‌ನಿಂದ ಮಣಿಸಿತ್ತು.
ಜೀವನಶ್ರೇಷ್ಠ ಬೌಲಿಂಗ್(4-37) ಸಂಘಟಿಸಿದ ವೇಗದ ಬೌಲರ್ ತಸ್ಕಿನ್ ಅಹ್ಮದ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಪಂದ್ಯ ಗೆಲ್ಲಲು 662 ರನ್ ಗುರಿ ಪಡೆದಿದ್ದ ಅಫ್ಘಾನಿಸ್ತಾನ ನಾಲ್ಕನೇ ದಿನವಾದ ಶನಿವಾರ 2 ವಿಕೆಟ್ ನಷ್ಟಕ್ಕೆ 45 ರನ್‌ನಿಂದ 2ನೇ ಇನಿಂಗ್ಸ್ ಮುಂದುವರಿಸಿತು. 33 ಓವರ್‌ಗಳಲ್ಲಿ ಕೇವಲ 115 ರನ್‌ಗೆ ಆಲೌಟಾಗಿ ಹೀನಾಯವಾಗಿ ಸೋಲುಂಡಿತು. ಅಫ್ಘಾನ್ ಬ್ಯಾಟಿಂಗ್‌ನಲ್ಲಿ ಆರಂಭಿಕ ಬ್ಯಾಟರ್ ರಹಮತ್ ಶಾ(30 ರನ್,73 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಕರೀಮ್ ಜನತ್(18 ರನ್) ಹಾಗೂ ನಾಯಕ ಹಶ್ಮತುಲ್ಲಾ ಶಾಹಿದಿ(13 ರನ್) ಎರಡಂಕೆಯ ಸ್ಕೋರ್ ಗಳಿಸಿದರು. ಉಳಿದವರು ವಿಫಲರಾದರು.
ತಸ್ಕಿನ್ ಅವರ ಬೌನ್ಸರ್‌ಗೆ ಅಫ್ಘಾನ್‌ನ ಕೊನೆಯ ಬ್ಯಾಟ್ಸ್ ಮನ್ ಝಹೀರ್ ಖಾನ್(4 ರನ್) ಗಾಯಗೊಂಡು ನಿವೃತ್ತಿ ಯಾದರು. ಇದರೊಂದಿಗೆ ಅಫ್ಘಾನ್ ಇನಿಂಗ್ಸ್‌ಗೆ ತೆರೆ ಬಿತ್ತು.
ಬಾಂಗ್ಲಾದೇಶದ 662 ರನ್‌ಗೆ ಉತ್ತರಿಸಲಾಗದೆ ಅಫ್ಘಾನಿಸ್ತಾನ ಅಕ್ಷರಶಃ ಪರದಾಟ ನಡೆಸಿತು. ಪರಿಣಾಮವಾಗಿ ಬಾಂಗ್ಲಾದೇಶ ತಂಡ 1934ರ ನಂತರ ಭಾರೀ ರನ್ ಅಂತರದಿಂದ ಜಯ ಸಾಧಿಸಿತು. 1934ರಲ್ಲಿ ಆಸ್ಟ್ರೇಲಿಯವು 562 ರನ್ ಅಂತರದ ಜಯ ಗಳಿಸಿತ್ತು. ಈ ಗೆಲುವಿನ ಮೂಲಕ ಬಾಂಗ್ಲಾದೇಶವು ತನ್ನ ಹಿಂದಿನ ಗೆಲುವಿನ ದಾಖಲೆಯನ್ನು ಉತ್ತಮಪಡಿಸಿಕೊಂಡಿತು. ಬಾಂಗ್ಲಾವು 2005ರಲ್ಲಿ ಚಿತ್ತಗಾಂಗ್‌ನಲ್ಲಿ ಝಿಂಬಾಬ್ವೆ ವಿರುದ್ಧ 226 ರನ್, ಅಂತರದಿಂದ ಗೆಲುವು ಪಡೆದಿತ್ತು.
ಆತಿಥೇಯ ತಂಡವು ಶುಕ್ರವಾರ ತನ್ನ 2ನೇ ಇನಿಂಗ್ಸ್‌ನ್ನು 4 ವಿಕೆಟ್‌ಗಳ ನಷ್ಟಕ್ಕೆ 425 ರನ್‌ಗೆ ಡಿಕ್ಲೇರ್ ಮಾಡಿ ಅಫ್ಘಾನ್ ಗೆಲುವಿಗೆ ಕಠಿಣ ಗುರಿ ನೀಡಿದ ನಂತರ ಗೆಲುವು ಬಹುತೇಕ ಖಚಿತವೆನಿಸಿತು. ಅಫ್ಘಾನಿಸ್ತಾನವು ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಆರಂಭಿಕ ಬ್ಯಾಟರ್ ಇಬ್ರಾಹೀಂ ಝದ್ರಾನ್ ವಿಕೆಟನ್ನು ಕಳೆದು ಕೊಂಡಿತು. ಅಫ್ಘಾನಿಸ್ತಾನವು ನಿರಂತರವಾಗಿ ವಿಕೆಟ್ ಕಳೆದು ಕೊಳ್ಳುತ್ತಾ ಸಾಗಿದ್ದು, ತಸ್ಕಿನ್ ಹಾಗೂ ಶರಿಫುಲ್ ಇಸ್ಲಾಮ್ (3-28) ಎದುರಾಳಿ ತಂಡವನ್ನು ಇನ್ನಿಲ್ಲದಂತೆ ಕಾಡಿದರು.
ತಸ್ಕಿನ್ ಚೊಚ್ಚಲ ಐದು ವಿಕೆಟ್ ಗೊಂಚಲು ಪಡೆಯುವು ದರಿಂದ ವಂಚಿತರಾದರು. ಬಾಂಗ್ಲಾದೇಶವು ಮೊದಲ ಇನಿಂಗ್ಸ್ ನಲ್ಲಿ 382 ರನ್‌ಗೆ ಆಲೌಟಾಯಿತು. ಅಫ್ಘಾನಿಸ್ತಾನವನ್ನು 146 ರನ್‌ಗೆ ಆಲೌಟ್ ಮಾಡಿದ ಬಾಂಗ್ಲಾವು 236 ರನ್ ಇನಿಂಗ್ಸ್ ಮುನ್ನಡೆ ಪಡೆಯಿತು. ಅಫ್ಘಾನಿಸ್ತಾನವು 2019ರಲ್ಲಿ ಚಿತ್ತಗಾಂಗ್‌ನಲ್ಲಿ ಆಡಿದ್ದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯವನ್ನು 224 ರನ್‌ನಿಂದ ಗೆದ್ದುಕೊಂಡು ಗಮನ ಸೆಳೆದಿತ್ತು.
ಮೊದಲ ಇನಿಂಗ್ಸ್‌ನಲ್ಲಿ 146 ರನ್ ಹಾಗೂ 2ನೇ ಇನಿಂಗ್ಸ್ ನಲ್ಲಿ 124 ರನ್ ಗಳಿಸಿದ್ದ ಬಾಂಗ್ಲಾದೇಶದ ಬ್ಯಾಟರ್ ನಜ್ಮುಲ್ ಹುಸೇನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಹುಸೇನ್ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ ಬಾಂಗ್ಲಾದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. 2018ರಲ್ಲಿ ಶ್ರೀಲಂಕಾದ ವಿರುದ್ಧ ಚಟ್ಟೋಗ್ರಾಮ್‌ನಲ್ಲಿ ಮೊಮಿನುಲ್ ಹಕ್ ಈ ಸಾಧನೆ ಮಾಡಿದ್ದರು.
ಸಂಕ್ಷಿಪ್ತ ಸ್ಕೋರ್
► ಬಾಂಗ್ಲಾದೇಶ ಮೊದಲ ಇನಿಂಗ್ಸ್: 382 ರನ್
► ಅಫ್ಘಾನಿಸ್ತಾನ ಮೊದಲ ಇನಿಂಗ್ಸ್: 146 ರನ್
► ಬಾಂಗ್ಲಾದೇಶ ಎರಡನೇ ಇನಿಂಗ್ಸ್: 425/4 ಡಿಕ್ಲೇರ್
► ಅಫ್ಘಾನಿಸ್ತಾನ 2ನೇ ಇನಿಂಗ್ಸ್: 115 ರನ್
► ಪಂದ್ಯಶ್ರೇಷ್ಠ: ನಜ್ಮುಲ್ ಹುಸೇನ್