ಹುಬ್ಬಳ್ಳಿ- ಧಾರವಾಡ ಪಾಲಿಕೆ ಮೇಯರ್ ಚುನಾವಣೆ: ರೆಸಾರ್ಟ್ ನತ್ತ ತೆರಳಿದ ಬಿಜೆಪಿ ಸದಸ್ಯರು?

ಹುಬ್ಬಳ್ಳಿ: ಹು-ಧಾ ಪಾಲಿಕೆ ಮೇಯರ್ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಕಾಂಗ್ರೆಸ್ ಬಿಜೆಪಿ ಸದಸ್ಯರನ್ನು ಸೆಳೆಯುವ ಭೀತಿ ಹಿನ್ನಲೆಯಲ್ಲಿ ಬಿಜೆಪಿ ಸದಸ್ಯರು ಹುಬ್ಬಳ್ಳಿಯಿಂದ ಉತ್ತರ ಕನ್ನಡ ಜಿಲ್ಲೆಯ ರೆಸಾರ್ಟ್ ನತ್ತ ಪ್ರಯಾಣ ಬೆಳೆಸಿದ್ದಾರೆನ್ನಲಾಗಿದೆ.
ಸದ್ಯ ಹು-ಧಾ ಪಾಲಿಕೆ ಗದ್ದುಗೆ ಹಿಡಿದಿರುವ ಬಿಜೆಪಿ ಸದಸ್ಯರಲ್ಲಿ ಜಗದೀಶ್ ಶೆಟ್ಟರ್ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾದರೆ ಹು-ಧಾ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರ ಗದ್ದುಗೆ ಏರುವಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯರಾದ ಸುರೇಶ್ ಬೇದ್ರೆ, ಉಪಮೇಯರ್ ಉಮಾ ಮುಕುಂದ ಸೇರಿದಂತೆ ಹಲವರು ರೆಸಾರ್ಟ್ ನತ್ತ ಪ್ರಯಾಣ ಬೆಳೆಸಿದ್ದಾರೆನ್ನಲಾಗಿದೆ.
ಇನ್ನು ಇತ್ತೀಚೆಗಷ್ಟೇ ಪತ್ರಿಕಾಗೋಷ್ಠಿಯಲ್ಲಿ ಹು-ಧಾ ಪಾಲಿಕೆ ಮೇಯರ್, ''ಕಾಂಗ್ರೆಸ್ ನವರು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರುವ ದುರದ್ದೇಶದಿಂದ ಬಿಜೆಪಿ ಪಾಲಿಕೆ ಸದಸ್ಯರಿಗೆ ಆಮೀಷ ಒಡ್ಡಿ ತಮ್ಮ ಪಕ್ಷಕ್ಕೆ ಸೆಳೆಯಲು ಯತ್ನಿಸುತ್ತಿದೆ'' ಎಂದು ಆರೋಪಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮೇಯರ್ ಈರೇಶ ಅಂಚಟಗೇರಿ, ''ಕೆಲವರು ವಾರಾಂತ್ಯ ಕಳೆಯಲು ರೆಸಾರ್ಟ್ ಗೆ ತೆರಳಿರಬಹುದು.ಆದರೆ, ಬಹುತೇಕ ಬಿಜೆಪಿ ಸದಸ್ಯರು ನಗರದಲ್ಲೇ ಇದ್ದಾರೆ. ರೆಸಾರ್ಟ್ ಗೆ ತೆರಳಿದ್ದಾರೆ ಎಂಬುದು ಊಹಾಪೋಹ'' ಎಂದು ಹೇಳಿದ್ದಾರೆ.







