ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆಗೆ ಚಿಂತನೆ: ಸಚಿವ ಬಿ.ನಾಗೇಂದ್ರ

ದಾವಣಗೆರೆ : 'ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ. ಈಗಾಗಲೇ ಬಜೆಟ್ ಪೂರ್ವ ಸಭೆ ಯಲ್ಲಿ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದೆ. ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಅಥವಾ ಮೈಸೂರು ಭಾಗದ ಎಚ್ ಡಿ ಕೋಟೆಯಲ್ಲಿ ಈ ಬುಡಕಟ್ಟು ವಿವಿ ಸ್ಥಾನಗೆ ಚಿಂತನೆ ನಡೆದಿದೆ' ಎಂದು ಪರಿಶಿಷ್ಟ ಪಂಗಡ ವ್ಯವಹಾರಗಳ ಸಚಿವ ಬಿ. ನಾಗೇಂದ್ರ ತಿಳಿಸಿದ್ದಾರೆ.
ಹರಿಹರದ ರಾಜನಹಳ್ಳಿ ಗ್ರಾಮದಲ್ಲಿರುವ ಮಹರ್ಷಿ ವಾಲ್ಮೀಕಿ ಗುರು ಪೀಠದ ಆವರಣದಲ್ಲಿ ನಡೆದ ಒಂದು ದಿನದ ಕಾರ್ಯಾಗಾರ ಹಾಗೂ ಸಮುದಾಯದ ನೂತನ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ 2023 ಜಾತ್ರಾ ಸಮಿತಿ ವಿ.ಎಸ್.ಎಸ್ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು ಮಾತನಾಡಿದರು.
'ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದಲ್ಲಿ ವಾಲ್ಮೀಕಿ ಸಮಾಜಸೇರಿ ವಿವಿಧ ಬುಡಕಟ್ಟು ಜನಾಂಗಳಿವೆ. ಇದೇ ಕಾರಣಕ್ಕೆ ಬುಡಕಟ್ಟು ವಿವಿ ಸ್ಥಾಪನೆ ಚಿಂತನ ಮಾಡಲಾಗಿದೆ. ಬೆಂಗಳೂರಿನಲ್ಲಿ ವಾಲ್ಮೀಕಿ ವಸತಿ ನಿಲಯ ಸ್ಥಾಪನೆ ಮಾಡಲಾಗಿದೆ. ಎಸ್ಟಿ ಸಮುದಾಯದ ಕ್ಲಾಸ್ 1, ಕ್ಲಾಸ್ 2 ಗುತ್ತಿಗೆದಾರರಿಗೆ ಶೇ.20ರಷ್ಟು ಮುಂಗಡ ಹಣ ನೀಡುವ ಚಿಂತನೆ ಇದೆ. ಇದರಿಂದ ನಾಯಕ ಸಮುದಾಯದ ಗುತ್ತಿಗೆದಾರರಿಗೂ ಅನುಕೂಲವಾಗುತ್ತದೆ. ಇದೇ ಉದ್ದೇಶದಿಂದ ಶೇ.20ರಷ್ಟು ಮುಂಗಡ ನೀಡುವ ಆಲೋಚನೆ ಇದೆ' ಎಂದು ತಿಳಿಸಿದರು.
'ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಮೊಬೈಲೈಸೇಷನ್ ಅಡ್ವಾನ್ಸ್ ಮಾಡಲು ಚಿಂತನೆ ಇದೆ. ಸಿಎಂ ಜೊತೆ ಚರ್ಚಿಸಿದ್ದು, ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ' ಎಂದು ಅವರು ಹೇಳಿದರು.
''ಸಾರ್ವಜನಿಕರು ತಮ್ಮನ್ನು ನೇರವಾಗಿ ಭೇಟಿಯಾಗಬಹುದು. ಯಾವುದೇ ಮಧ್ಯವರ್ತಿಗಳು ಇಲ್ಲದೇ, ತಮ್ಮನ್ನು ನೇರವಾಗಿ ಭೇಟಿ ಮಾಡಿ, ನಿಮ್ಮ ಕೆಲಸ, ಕಾರ್ಯಗಳನ್ನು ಮಾಡಿಸಿಕೊಳ್ಳಬೇಕು. ಸ್ವಚ್ಛ ಮತ್ತು ಪಾರದರ್ಶಕ ಆಡಳಿತವೇ ನಮ್ಮ ಗುರಿಯಾಗಿದೆ. ರಾಜ್ಯದ ಜನರು, ಯಾವುದೇ ಜಿಲ್ಲೆಯವರಾಗಿದ್ದರೂ ಯಾರ ಸಹಾಯವೂ ಇಲ್ಲದೇ, ನೇರವಾಗಿ ತಮ್ಮನ್ನು ಭೇಟಿಯಾಗಬಹುದು'' ಎಂದು ಸ್ಪಷ್ಟಪಡಿಸಿದರು.
ಲೋಕೋಪಯೋ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ," ವಾಲ್ಮೀಕಿ ಸಮಾಜದ ಮೀಸಲಾತಿ ಹೆಚ್ಚಳ ವಿಚಾರ ಕೇಂದ್ರ ಸರ್ಕಾರ ವ್ಯಾಪ್ತಿಯಲ್ಲಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ಕ್ರಮಕೈಗೊಳ್ಳಲಿದೆ. ಅಲ್ಲದೇ ಕಾಂಗ್ರೆಸ್ ಸರ್ಕಾರದ ಬಗ್ಗೆ ವಾಲ್ಮೀಕಿ ಸಮುದಾಯ ಭರವಸೆ ಇಟ್ಟುಕೊಂಡಿದೆ'' ಎಂದು ಹೇಳಿದರು.
'ಬಾಬಾ ಸಾಹೇಬ ಅಂಬೇಡ್ಕರ್ ರವರು ಬರೆದಿರುವ ನಮ್ಮ ಸಂವಿಧಾನ ಚೆನ್ನಾಗಿದೆ. ಆದರೆ, ಅದನ್ನು ನಿರ್ವಹಣೆ ಮಾಡುವವರು ಚೆನ್ನಾಗಿರಬೇಕು. ಆಗ ಮಾತ್ರ ಸಮುದಾಯಕ್ಕೆ ಮತ್ತು ದೇಶಕ್ಕೆ ಒಳಿತಾಗುತ್ತದೆ. ವಾಲ್ಮೀಕಿ ಸಮಾಜದ ಶೇ 46 ಜನರು ನಮ್ಮ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಶ್ರೀಗಳು ಮೀಸಲಾತಿಗಾಗಿ ಪ್ರೀಡಂ ಪಾರ್ಕನಲ್ಲಿ 257 ದಿನಗಳ ಕಾಲ ಅವಿರತ ಹೋರಾಟ ನಡೆಸಿದ್ದರ ಪರಿಣಾಮ ಬಿಜೆಪಿ ಮೀಸಲಾತಿ ನೀಡಿದೆ' ಎಂದರು.








