ನೀರು ಪಾಲಾಗಿದ್ದ ಯುವಕನ ಮೃತ ದೇಹ ಪತ್ತೆ

ಕಲಬುರಗಿ: ಜಿಲ್ಲೆಯ ಶಹಾಬಾದ ತಾಲೂಕಿನ ಗೋಳಾ(ಕೆ) ಗ್ರಾಮದ ಕಾಗಿಣಾ ನದಿಯಲ್ಲಿ ಈಜಲು ಹೋಗಿ ನೀರು ಪಾಲಾದ ಯುವಕನ ಮೃತ ದೇಹ ರವಿವಾರ ಮಧ್ಯಾಹ್ನ ಪತ್ತೆಯಾಗಿದೆ.
ತೊನಸನಹಳ್ಳಿ(ಎಸ್) ಗ್ರಾಮದ ತೇಜಸ್ ಬಸವರಾಜ ಕುಂಬಾರ(22)ಮೃತ ಯುವಕನಾಗಿದ್ದು, ಈತ ತೊನಸನಹಳ್ಳಿ(ಎಸ್) ಗ್ರಾಮದಿಂದ ಶನಿವಾರ ಗೆಳೆಯರೊಂದಿಗೆ ಗೋಳಾ(ಕೆ) ಗ್ರಾಮದ ಕಾಗಿಣಾ ನದಿಯಲ್ಲಿ ಈಜಲು ಹೋಗಿ ಮುಳುಗಿದ್ದಾನೆನ್ನಲಾಗಿದೆ.
ತೇಜಸ್ ಮುಳುಗುತ್ತಿರುವುದನ್ನು ಕಂಡ ಗೆಳೆಯರು ರಕ್ಷಿಸಲು ಮುಂದಾಗಿದ್ದರಾದರೂ, ಅವನನ್ನು ಕಾಪಾಡಲು ಸಾಧ್ಯವಾಗಲಿಲ್ಲ. ತಕ್ಷಣವೇ ಗೆಳೆಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ; ಕಲಬುರಗಿ: ಇಬ್ಬರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಂದೆ
ನಂತರ ಗ್ರೇಡ್-2 ತಹಸೀಲ್ದಾರ ಗುರುರಾಜ ಸಂಗಾವಿ ಹಾಗೂ ಪಿಎಸ್ಐ ಅಶೋಕ ಪಾಟೀಲ ಅವರು ಅಗ್ನಿಶಾಮಕ ದಳ ಮತ್ತು ಸ್ಥಳೀಯ ಮೀನುಗಾರರ ಸಹಾಯ ಪಡೆದು ಮೃತ ದೇಹದ ಶೋಧ ಕಾರ್ಯ ತಡರಾತ್ರಿಯವರೆಗೂ ನಡೆಸಿದರೂ ಶನಿವಾರ ದೇಹ ಪತ್ತೆಯಾಗಿರಲಿಲ್ಲ. ಮತ್ತೆ ರವಿವಾರ ಎನ್ ಡಿಆರ್ ಎಫ್,ಅಗ್ನಿಶಾಮಕ ದಳ, ಮೀನುಗಾರರ ತಂಡ ನದಿಯಲ್ಲಿ ಹುಡುಕಾಟ ನಡೆಸಿ ಮಧ್ಯಾಹ್ನ ಮೃತ ದೇಹವನ್ನು ಪತ್ತೆ ಹಚ್ಚಿದ್ದಾರೆ.
ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







