ಪ್ರಗತಿಪರ ಚಿಂತಕರು ಬಡವರ ಸಮಸ್ಯೆಗಳ ಬಗ್ಗೆಯೂ ಧ್ವನಿಯಾಗಬೇಕು: ದಿನೇಶ್ ಅಮಿನ್ ಮಟ್ಟು

ಮೈಸೂರು, ಜೂ.18: ಪ್ರಗತಿಪರ ಚಿಂತಕರು ಕೇವಲ ಕೋಮುವಾದದ ವಿರೋಧಿ ಚಳವಳಿಗೆ ಸೀಮಿತವಾಗದೆ ಬಡವರ ಸಮಸ್ಯೆಗಳಾದ ಬೆಲೆ ಏರಿಕೆ, ನಿರುದ್ಯೋಗ, ಬಡತನದ ಬಗ್ಗೆಯೂ ಹೆಚ್ಚು ಧ್ವನಿಯಾಗಬೇಕು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅಭಿಪ್ರಾಯಪಟ್ಟರು.
ರಂಗಾಯಣ ಆವರಣದ ಶ್ರೀರಂಗ ವೇದಿಕೆಯಲ್ಲಿ ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ರವಿವಾರ ನಡೆದ ವಿಚಾರವಾದಿ ಪ್ರೊ.ಕೆ.ರಾಮದಾಸ್ ನೆನಪಿನಲಿ ಶೀರ್ಷಿಕೆಯಡಿ ಸ್ಮರಣಾರ್ಥ ಸಂವಾದ, ಪುಸ್ತಕ ಬಿಡುಗಡೆ ಹಾಗೂ ಲೇಖನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ವಿಧಾನಸಭೆ ಚುನಾವಣಾ ಫಲಿತಾಂಶ ಕೋಮುವಾದದ ವಿರುದ್ಧ ಜಯವೇ? ನಿಜಕ್ಕೂ ಅಲ್ಲ. ಬೆಲೆ ಏರಿಕೆ, ನಿರುದ್ಯೋಗದ ವಿರುದ್ಧ ಹಾಕಿರುವ ಮತ ಅದು. ಸಂಕಷ್ಟಕ್ಕೆ ಸಿಲುಕಿಸಿದ್ದ ಪಕ್ಷದ ವಿರುದ್ಧ ಜನಸಾಮಾನ್ಯರು ಸಿಡಿದೆದ್ದಿದ್ದರು. ಆದರೆ, ಈ ಚುನಾವಣೆಯಲ್ಲಿ ಕೋಮುವಾದದ ವಿರುದ್ಧ ಪ್ರಗತಿಪರರ ಹೋರಾಟ ನಗಣ್ಯ ಎಂದು ಹೇಳಲ್ಲ. ಅವರ ಪಾತ್ರವೂ ಇದೆ. ಆದರೆ, ಕೋಮುವಾದದ ವಿರುದ್ಧ ಮತವಲ್ಲ. ಅದು ಮುಗಿಯದ ಟಾಸ್ಕ್. ಅದಕ್ಕಾಗಿ ನಿರಂತರವಾಗಿ ಹೋರಾಟವನ್ನು ಮುಂದುವರಿ ಸಿಕೊಂಡು ಹೋಗಬೇಕು ಎಂದರು.
ಕೋಮುವಾದ ವಿರೋಧಿ ಹೋರಾಟವನ್ನು ಅಷ್ಟಕ್ಕೆ ಸೀಮಿತಗೊಳಿಸಬಾರದು. ಬೆಲೆ ಏರಿಕೆ, ನಿರುದ್ಯೋಗ, ಅಲ್ಪಸಂಖ್ಯಾತರ ಅಭದ್ರತೆ, ಸಾಮಾಜಿಕ ಸಮಸ್ಯೆಯೊಂದಿಗೆ ಈ ಹೋರಾಟದ ನೆಲೆ-ದಾರಿಯನ್ನು ವಿಸ್ತರಣೆ ಮಾಡಿಕೊಳ್ಳಬೇಕು. ಇದಕ್ಕೆ ಸ್ಥಳೀಯ ನಾಯಕತ್ವ ಬೆಳೆಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಒಂದು ಪೋಸ್ಟರ್ ಹಾಕಿದ ಮಾತ್ರಕ್ಕೆ ಯಾರೂ ಪ್ರಗತಿಪರ ಚಿಂತಕರೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
1983ರ ವಿಧಾನಸಭೆ ಚುನಾವಣೆಗೂ 2023ರ ವಿಧಾನಸಭೆ ಚುನಾವಣೆಗೂ ಸಾಮ್ಯತೆ ಇದೆ. ಈಗಲೂ ಪ್ರಗತಿಪರರ ಒಗ್ಗಟ್ಟಿನ ಫಲವಾಗಿ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತದೆ. ಈ ಕಾರಣಕ್ಕೆ ಸಂಭ್ರಮಿಸುತ್ತಿರುವ ಪ್ರಗತಿಪರರು ಎಚ್ಚರಿಕೆಯನ್ನೂ ವಹಿಸಬೇಕು. ಪ್ರೊ.ಕೆ.ರಾಮದಾಸ್ ಈಗ ಇದ್ದಿದ್ದರೆ ಸಂಭ್ರಮಿಸಿ ಮತ್ತೊಂದು ಹೋರಾಟಕ್ಕೆ ಸಜ್ಜಾಗುತ್ತಿದ್ದರು ಎಂದರು.
ವಿವಿಧ ಚಳವಳಿಗಾರರು, ಪ್ರಗತಿಪರರು ಸೇರಿಕೊಂಡು 1983ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿ, ಜನತಾಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದ್ದರು. ಬಳಿಕ ಪ್ರಗತಿಪರರೆಲ್ಲ ಮೈಮರೆತರು. ಅದರ ಫಲವಾಗಿ ಇಡೀ ಚಳವಳಿ ಪತನಗೊಂಡಿತ್ತು. ಸಿಎಂ ಆಗಿದ್ದ ರಾಮಕೃಷ್ಣ ಹೆಗಡೆ ರೈತರ, ದಲಿತ ಚಳವಳಿಯನ್ನು ಧ್ವಂಸಗೊಳಿಸಿದರು. ಈವರೆಗೂ ಚಳವಳಿಗಳು ಚೇತರಿಸಿಕೊಂಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
1983ರಲ್ಲಿ ಇದ್ದದ್ದು ರಾಮಕೃಷ್ಣ ಹೆಗಡೆ. ಈಗಿ ರುವುದು ಸಿದ್ದರಾಮಯ್ಯ. ಇವರು ಪ್ರಾಮಾಣಿಕರು, ಸೈದ್ಧಾಂತಿಕ ಬದ್ಧತೆ ಇರುವವರು. ಆದರೆ, ಸಿದ್ದರಾಮಯ್ಯ ಪ್ರತಿನಿಧಿಸುವ ಪಕ್ಷಕ್ಕೆ ಪ್ರಾಮಾಣಿಕತೆ ಇದೆಯೇ? ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ತರುವಾಗ ಹೇಗೆ ಕಾಂಗ್ರೆಸ್ ಒಳಗಿನವರೇ ವಿರೋಧಿಸಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ಚಳವಳಿಯ ಮುಂಚೂಣಿ ನಾಯಕರು ದಾರಿತಪ್ಪಬಾರದು ಎಂದು ಎಚ್ಚರಿಸಿದರು.
ಅಂಬೇಡ್ಕರ್, ಕುವೆಂಪು, ಲಂಕೇಶ್, ತೇಜಸ್ವಿ ಅವರೆಲ್ಲ ಈ ದುರಿತಕಾಲದಲ್ಲಿ ಇರಬೇಕಿತ್ತು ಎಂದು ಬಹಳಷ್ಟು ಜನರು ಹೇಳುತ್ತಾರೆ. ಆದರೆ, ಅವರು ಅವರ ಕೆಲಸ ಮಾಡಿ ಹೋಗಿದ್ದಾರೆ. ನಾವು ಏನು ಮಾಡಿದ್ದೇವೆ? ನಮ್ಮ ಕೆಲಸ ಏನು? ಎಂದು ಪ್ರಶ್ನಿಸಿದರು. ಕಾರ್ಯಕ್ರಮದಲ್ಲಿ ಚಿಂತಕರಾದ ಡಾ.ಬಂಜಗೆರೆ ಜಯಪ್ರಕಾಶ್, ಪುರುಷೋತ್ತಮ ಬಿಳಿಮಲೆ, ಕೃಷ್ಣಪ್ಪ ಹನಗವಾಡಿ, ಇನ್ನಿತರರು ಉಪಸ್ಥಿತರಿದ್ದರು.







