ಡಿಆರ್‌ಡಿಓದಿಂದ ಮಹತ್ವದ ಸಾಧನೆ: ನೌಕಾಪಡೆಯ ಸಹಯೋಗದಲ್ಲಿ ತಪಸ್ ಯುಎವಿ ಪ್ರಯೋಗಾರ್ಥ ಹಾರಾಟ ಯಶಸ್ವಿ

ಹೊಸದಿಲ್ಲಿ: ಮಹತ್ವದ ಸಾಧನೆಯೊಂದರಲ್ಲಿ ಭಾರತೀಯ ನೌಕಾಪಡೆಯ ಸಹಭಾಗಿತ್ವದಲ್ಲಿ ತಪಸ್ ಮಾನವರಹಿತ ವೈಮಾನಿಕ ವಾಹನ (UAV)ದ ಕಮಾಂಡ್ ಮತ್ತು ಕಂಟ್ರೋಲ್ ಸಾಮರ್ಥ್ಯಗಳ ವರ್ಗಾವಣೆಯನ್ನು ಯಶಸ್ವಿಯಾಗಿ ಪ್ರದರ್ಶಿಸಲಾಗಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯು ರವಿವಾರ ತಿಳಿಸಿದೆ.
ಯುಎವಿಯನ್ನು ದೂರದ ಗ್ರೌಂಡ್ ಸ್ಟೇಷನ್ ನಿಂದ ಕಾರವಾರ ನೌಕಾನೆಲೆಯಿಂದ 148 ಕಿ.ಮೀ.ದೂರದಲ್ಲಿ ಸ್ಥಿತ ಐಎನ್ಎಸ್ ಸುಭದ್ರಾ ನೌಕೆಯಲ್ಲಿನ ಸ್ಟೇಷನ್ ಗೆ ಕಮಾಂಡ್ ಮಾಡುವುದನ್ನು ಜೂ.16ರಂದು ನಡೆದಿದ್ದ ಪ್ರಾತ್ಯಕ್ಷಿಕೆಯು ಒಳಗೊಂಡಿತ್ತು.
ಕಾರವಾರ ನೌಕಾ ನೆಲೆಯಿಂದ 285 ಕಿ.ಮೀ.ದೂರದ ಚಿತ್ರದುರ್ಗದ ವೈಮಾನಿಕ ಪರೀಕ್ಷಾ ವಲಯ (ಎಟಿಆರ್)ದಿಂದ ಬೆಳಿಗ್ಗೆ 7:35ಕ್ಕೆ ತಪಸ್ ಹಾರಾಟವನ್ನು ಪ್ರಾರಂಭಿಸಿತ್ತು.
‘ತಪಸ್ ಸಮುದ್ರ ಮಟ್ಟದಿಂದ 20,000 ಅಡಿ ಎತ್ತರದಲ್ಲಿ ದೋಷರಹಿತವಾಗಿ ಕಾರ್ಯಾಚರಿಸಿತ್ತು. ಐಎನ್ಎಸ್ ಸುಭದ್ರಾ 40 ನಿಮಿಷಗಳ ಅವಧಿಗೆ ತಪಸ್ನ ಕಾರ್ಯಾಚರಣೆಗಳ ನಿಯಂತ್ರಣವನ್ನು ವಹಿಸಿಕೊಳ್ಳುವುದರೊಂದಿಗೆ ಮೂರು ಗಂಟೆ ಮೂವತ್ತು ನಿಮಿಷಗಳ ಹಾರಾಟವನ್ನು ಪೂರ್ಣಗೊಳಿಸಿತು.
ನೆಲದಲ್ಲಿ ಒಂದು ನಿಯಂತ್ರಣ ಕೇಂದ್ರ ಮತ್ತು ಐಎನ್ ಎಸ್ ಸುಭದ್ರಾದಲ್ಲಿ ಎರಡು ಶಿಪ್ ಡೇಟಾ ಟರ್ಮಿನಲ್ ಗಳನ್ನು ಸ್ಥಾಪಿಸಲಾಗಿತ್ತು. ಯಶಸ್ವಿ ಪ್ರಯೋಗದ ಬಳಿಕ ತಪಸ್ ಎಟಿಆರ್ ಗೆ ವಾಪಸಾಗಿ ಸುರಕ್ಷಿತವಾಗಿ ಇಳಿಯಿತು ಎಂದು ಡಿಆರ್‌ಡಿಓ ಸರಣಿ ಟ್ವೀಟ್ ಗಳಲ್ಲಿ ತಿಳಿಸಿದೆ.
30,000 ಸಾವಿರ ಅಡಿಗಳ ಎತ್ತರದಲ್ಲಿ ಹಾರಾಡಬಲ್ಲ ತಪಸ್ 250 ಕಿ.ಮೀ.ಗೂ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿದೆ. ಗರಿಷ್ಠ 350 ಕೆ.ಜಿ.ಪೇಲೋಡ್ ಸಾಗಿಸುವ ಸಾಮರ್ಥ್ಯ ಹೊಂದಿರುವ ಅದನ್ನು ಭಾರತೀಯ ಸಶಸ್ತ್ರ ಪಡೆಗಳಿಗಾಗಿ ಬೇಹುಗಾರಿಕೆ, ಕಣ್ಗಾವಲು ಮತ್ತು ವಿಚಕ್ಷಣಾ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಡಿಆರ್‌ಡಿಓ ತಿಳಿಸಿದೆ.







