‘ಮನ್ ಕಿ ಬಾತ್’ನಲ್ಲಿ ಮಣಿಪುರದ ಬಗ್ಗೆ ಪ್ರಧಾನಿ ಮೌನ: ಕಾಂಗ್ರೆಸ್ ಖಂಡನೆ

ಗುವಾಹಟಿ: ‘ಮನ್ ಕಿ ಬಾತ್’ ರೇಡಿಯೋ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಣಿಪುರದ ಹಿಂಸಾಚಾರದ ಬಗ್ಗೆ ಮಾತನಾಡದಿರುವುದನ್ನು ಕಾಂಗ್ರೆಸ್ ಪಕ್ಷವು ತೀವ್ರವಾಗಿ ಖಂಡಿಸಿದೆ.
ರೇಡಿಯೋದಲ್ಲಿ ಮನ್ಕಿ ಬಾತ್ ಮುಕ್ತಾಯಗೊಂಡ ಕೂಡಲೇ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯೊಂದನ್ನು ನೀಡಿ, ಪ್ರಧಾನಿಯ ರೇಡಿಯೋ ಭಾಷಣವು ‘ಮಣಿಪುರಿ ಕಿ ಬಾತ್’ ಅನ್ನು ಕೂಡಾ ಒಳಗೊಳ್ಳಬೇಕಿತ್ತು ಎಂದು ಹೇಳಿದ್ದಾರೆ. ‘‘ಮಣಿಪುರದ ಪರಿಸ್ಥಿತಿ ಅತ್ಯಂತ ಘೋರವಾಗಿದೆ ಹಾಗೂ ಅತ್ಯಂತ ಕಳವಳಕಾರಿಯಾಗಿದೆ. ಆದರೆ ಆ ಬಗ್ಗೆ ನೀವು ಒಂದೇ ಒಂದು ಮಾತನ್ನೂ ಆಡಿಲ್ಲ. ಒಂದೇ ಒಂದು ಸಭೆಯನ್ನೂ ನಡೆಸಿಲ್ಲ.
ಇನ್ನೂ ಕೂಡಾ ಮಣಿಪುರದ ಸರ್ವ ಪಕ್ಷ ನಿಯೋಗವನ್ನು ಭೇಟಿಯಾಗಿಲ್ಲ. ನಿಮ್ಮ ಸರಕಾರವು ಮಣಿಪುರವನ್ನು ಭಾರತದ ಭಾಗವೆಂದು ಪರಿಗಣಿಸಿಲ್ಲವೆಂಬಂತೆ ಕಾಣುತ್ತದೆ. ಇದು ಒಪ್ಪತಕ್ಕದ್ದಲ್ಲ. ಮಣಿಪುರ ಹೊತ್ತಿ ಉರಿಯುತ್ತಿರುವಾಗ ನಿಮ್ಮ ಸರಕಾರವು ಗಾಢನಿದ್ದೆಯಲ್ಲಿದೆ’’ ಎಂದವರು ಟೀಕಿಸಿದ್ದಾರೆ.
ರಾಜಧರ್ಮವನ್ನು ಪಾಲಿಸುವಂತೆ ಪ್ರಧಾನಿಯನ್ನು ಕೇಳಿಕೊಂಡಿರುವ ಖರ್ಗೆ, ಶಾಂತಿಯನ್ನು ಕದಡುವವರ ವಿರುದ್ಧ ದೃಢವಾಗಿ ಕಾರ್ಯಾಚರಿಸುವಂತೆ ಸೂಚಿಸಿದ್ದಾರೆ. ಪೌರ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಂತಿಯನ್ನು ಮರುಸ್ಥಾಪಿಸಬೇಕು ಹಾಗೂ ಸರ್ವಪಕ್ಷ ನಿಯೋಗವು ರಾಜ್ಯವನ್ನು ಸಂದರ್ಶಿಸಲು ಅನುಮತಿ ನೀಡುವಂತೆ ಅವರು ಆಗ್ರಹಿಸಿದ್ದಾರೆ.
ಪೂರ್ವ ಇಂಫಾಲ್ ಜಿಲ್ಲೆಯಲ್ಲಿ ಜನರ ಗುಂಪೊಂದು ರೇಡಿಯೋ ಸೆಟ್ಗಳನ್ನು ಮುರಿದುಹಾಕುವ ಮೂಲಕ ಪ್ರತಿಭಟನೆ ನಡೆಸುತ್ತಿರುವ ದೃಶ್ಯದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ಯಾಕೆ ಮನ್ ಕಿ ಬಾತ್ ನಲ್ಲಿ ಮಾತನಾಡದಿರುವುದನ್ನು ವಿರೋಧಿಸಿ, ಈ ಪ್ರತಿಭಟನೆ ನಡೆದಿತ್ತೆನ್ನಲಾಗಿದೆ.







