ಆಫ್ರಿಕನ್ ನಿಯೋಗದ ಯೋಜನೆಯ ಅಂಶಗಳಿಗೆ ಪುಟಿನ್ ನಕಾರ

ಮಾಸ್ಕೊ: ಉಕ್ರೇನ್ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆಗೆ ಮುಂದಾಗಿರುವ ಆಫ್ರಿಕನ್ ಮುಖಂಡರ
ಹಲವು ಪ್ರಸ್ತಾಪಗಳು ತಪ್ಪು ಗ್ರಹಿಕೆಯಿಂದ ಕೂಡಿವೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರತಿಕ್ರಿಯಿಸಿದ್ದು ಈ ಮೂಲಕ ಆಫ್ರಿಕನ್ ನಿಯೋಗದ ಯೋಜನೆಗೆ ತಣ್ಣೀರೆರಚಿದ್ದಾರೆ.
ವಿಶ್ವಾಸ ವೃದ್ಧಿಸುವ ಸರಣಿ ಕ್ರಮಗಳ ಬಗ್ಗೆ ಉಭಯ ದೇಶಗಳ ಮಧ್ಯೆ ಒಪ್ಪಂದಕ್ಕೆ ಆಫ್ರಿಕನ್ ನಿಯೋಗ ಪ್ರಯತ್ನಿಸಿತ್ತು. ಆದರೆ ಯಾವುದೇ ಮಾತುಕತೆ ಆರಂಭಕ್ಕೂ ಮುನ್ನ ರಶ್ಯವು ಆಕ್ರಮಿತ ಉಕ್ರೇನ್ ಪ್ರದೇಶದಿಂದ ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿ ಆಫ್ರಿಕನ್ ನಿಯೋಗಕ್ಕೆ ಸ್ಪಷ್ಟಪಡಿಸಿದ್ದರು.
ಶನಿವಾರ ರಶ್ಯ ಅಧ್ಯಕ್ಷ ಪುಟಿನ್ ಸೆನೆಗಲ್, ಈಜಿಪ್ಟ್, ಝಾಂಬಿಯಾ, ಉಗಾಂಡಾ, ಕಾಂಗೊ ಗಣರಾಜ್ಯ, ಕೊಮೊರೊಸ್ ಮತ್ತು ದ.ಆಫ್ರಿಕಾ ಮುಖಂಡರ ಜತೆ ಸೈಂಟ್ ಪೀಟರ್ಸ್ಬರ್ಗ್ನಲ್ಲಿ ಸಭೆ ನಡೆಸಿದರು. ಆದರೆ ಕೊಮೊರೊನ್, ಸೆನೆಗಲ್ ಮತ್ತು ದಕ್ಷಿಣ ಆಫ್ರಿಕಾ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದಾಗ, ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಗಡಿಗಳನ್ನು ಸಮ್ಮತಿಸಬೇಕು ಎಂಬ ಅಂಶವನ್ನು ಪುಟಿನ್ ತಳ್ಳಿಹಾಕಿದರು.
ರಶ್ಯವು ಉಕ್ರೇನ್‌ಗೆ ಸೇನೆ ಕಳುಹಿಸುವ ಮೊದಲೇ ಉಕ್ರೇನ್ ಮತ್ತದರ ಪಾಶ್ಚಿಮಾತ್ಯ ಮಿತ್ರರು ಸಂಘರ್ಷವನ್ನು ಆರಂಭಿಸಿದ್ದರು. ಜಾಗತಿಕ ಆಹಾರ ಬೆಲೆ ಏರಿಕೆಗೆ ಪಾಶ್ಚಿಮಾತ್ಯರು ಕಾರಣ, ರಶ್ಯವಲ್ಲ. ಉಕ್ರೇನ್‌ನ ಕಪ್ಪುಸಮುದ್ರ ಬಂದರಿನಿಂದ ಆಹಾರ ಧಾನ್ಯ ರಫ್ತಿಗೆ ರಶ್ಯ ಅನುಮತಿ ನೀಡಿದರೂ, ಉಕ್ರೇನ್‌ನ ಆಹಾರಧಾನ್ಯ ಶ್ರೀಮಂತ ದೇಶಗಳಿಗೆ ರಫ್ತಾಗಿದೆ.
ರಶ್ಯ ಯಾವತ್ತೂ ಉಕ್ರೇನ್ ಜತೆಗಿನ ಮಾತುಕತೆಯನ್ನು ತಿರಸ್ಕರಿಸಿಲ್ಲ. ಆದರೆ ಉಕ್ರೇನ್ ಪ್ರಾಂತಗಳನ್ನು ತಾನು ಸ್ವಾಧೀನಪಡಿಸಿಕೊಂಡಿರುವ ಘೋಷಣೆಯನ್ನು ಒಪ್ಪಿಕೊಂಡರೆ ಮಾತುಕತೆ ಪ್ರಾರಂಭಿಸಬಹುದು ಎಂದು ಪುಟಿನ್ ಪ್ರತಿಪಾದಿಸಿರುವುದಾಗಿ ವರದಿಯಾಗಿದೆ.







