ನೇಪಾಳದಲ್ಲಿ ಪ್ರವಾಹ: ಇಬ್ಬರು ಮೃತ್ಯು; 28 ಮಂದಿ ನಾಪತ್ತೆ

ಕಠ್ಮಂಡು: ಪೂರ್ವ ನೇಪಾಳದಲ್ಲಿ ಮುಂಗಾರು ಮಳೆಯ ಅಬ್ಬರದಿಂದ ಭಾರೀ ಪ್ರವಾಹ ಹಾಗೂ ಹಲವೆಡೆ ಭೂಕುಸಿತ ಸಂಭವಿಸಿದೆ. ಮಳೆ ಹಾಗೂ ಪ್ರಾಕೃತಿಕ ವಿಕೋಪಕ್ಕೆ ಕನಿಷ್ಟ 2 ಮಂದಿ ಮೃತಪಟ್ಟಿದ್ದು 25 ಮಂದಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಸಂಖುವಸಭ ಜಿಲ್ಲೆಯಲ್ಲಿನ ಹೆವಾ ನದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಜಲವಿದ್ಯುತ್ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲಸಗಾರನೊಬ್ಬ ಮೃತಪಟ್ಟಿದ್ದು ಇತರ 17 ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಜಲವಿದ್ಯುತ್ ಯೋಜನೆಯ ಯಂತ್ರೋಪಕರಣಗಳು ನೆರೆಯಲ್ಲಿ ಕೊಚ್ಚಿಹೋಗಿವೆ ಎಂದು ಸ್ಥಳೀಯ ಅಧಿಕಾರಿಯನ್ನು ಉಲ್ಲೇಖಿಸಿ ಎಎಫ್‌ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ತಪ್ಲೆಜುಂಗ್ ಜಿಲ್ಲೆಯಲ್ಲಿ ಮನೆಯೊಂದು ಕೊಚ್ಚಿಹೋಗಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದು ಕುಟುಂಬದ ಇತರ ಮೂರು ಸದಸ್ಯರು ನಾಪತ್ತೆಯಾಗಿದ್ದಾರೆ. ಇದುವರೆಗೆ ಇಬ್ಬರ ಮೃತದೇಹ ಪತ್ತೆಯಾಗಿದೆ, ಆದರೆ ಇತರ 28 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದೇವೆ ಎಂದು ನೇಪಾಳದ ಪೊಲೀಸರು ಹೇಳಿದ್ದಾರೆ.
ಹಲವೆಡೆ ರಸ್ತೆಗಳು ಹಾಗೂ ಸೇತುವೆಗಳಿಗೆ ಹಾನಿಯಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ. ಹಲವೆಡೆ ಮನೆಗಳಿಗೆ ಹಾನಿಯಾದ ವರದಿಯಾಗಿದೆ ಎಂದು ಸಂಖುವಸಭ ಜಿಲ್ಲೆಯ ಸಹಾಯಕ ಜಿಲ್ಲಾಧಿಕಾರಿ ಮಹಾಮನಿ ಘಿಮಿರೆ ಹೇಳಿದ್ದಾರೆ. ಈ ಮಧ್ಯೆ, ಭಾರೀ ಮಳೆ ಮತ್ತಷ್ಟು ದಿನ ಮುಂದುವರಿಯಲಿದೆ ಎಂದು ಹವಾಮಾನ ಸಂಸ್ಥೆ ಮುನ್ನೆಚ್ಚರಿಕೆ ನೀಡಿದೆ.







