ಯುದ್ಧ ಅಂತ್ಯಕ್ಕೆ ಮಾತುಕತೆಯೊಂದೇ ದಾರಿ: ದ.ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸ

ಮಾಸ್ಕೊ: ಉಕ್ರೇನ್‌ನಲ್ಲಿನ ಸಂಘರ್ಷ ನಿಲ್ಲಬೇಕು. ಈಗ ನಡೆಯುತ್ತಿರುವ ಯುದ್ಧಕ್ಕೆ ಅಂತ್ಯವಿಲ್ಲ. ಇದನ್ನು ಮಾತುಕತೆ ಮತ್ತು ರಾಜತಾಂತ್ರಿಕ ರೀತಿಯಿಂದ ಮಾತ್ರ ಪರಿಹರಿಸಬಹುದು ಎಂದು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸ ಹೇಳಿದ್ದಾರೆ.
ಉಕ್ರೇನ್ ಬಿಕ್ಕಟ್ಟನ್ನು ಶಾಂತಿಯುತವಾಗಿ ಪರಿಹರಿಸಲು ದಕ್ಷಿಣ ಆಫ್ರಿಕಾ ನಡೆಸುತ್ತಿರುವ ಪ್ರಯತ್ನದ ಅಂಗವಾಗಿ ರಮಫೋಸ ಶನಿವಾರ ರಶ್ಯಕ್ಕೆ ಭೇಟಿ ನೀಡಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆ ಮಾತುಕತೆ ನಡೆಸಿದರು. ಈ ಸಂದರ್ಭ ಮಾತನಾಡಿದ ರಮಫೋಸ ‘ 7 ಆಫ್ರಿಕನ್ ಮುಖಂಡರನ್ನು ಒಳಗೊಂಡಿರುವ ನಿಯೋಗವು ಈ ಯುದ್ಧವನ್ನು ಕೊನೆಗೊಳಿಸಬೇಕು’ ಎಂಬ ಸ್ಪಷ್ಟ ಸಂದೇಶದೊಂದಿಗೆ ಆಗಮಿಸಿದೆ.
ಈ ಯುದ್ಧವು ಆಫ್ರಿಕಾ ಖಂಡ ಹಾಗೂ ವಿಶ್ವದಾದ್ಯಂತದ ಇತರ ಹಲವು ದೇಶಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಉಕ್ರೇನ್ ಜತೆ ಮಾತುಕತೆಗೆ ಮುಂದಾಗುವಂತೆ ಪುಟಿನ್‌ರನ್ನು ಪ್ರೋತ್ಸಾಹಿಸುವುದು ನಮ್ಮ ಉದ್ದೇಶವಾಗಿದೆ. ಪುಟಿನ್ ಅವರ ಮಾತನ್ನು ಆಲಿಸಲು, ಪುಟಿನ್ ಮೂಲಕ ರಶ್ಯ ಪ್ರಜೆಗಳ ಮಾತನ್ನು ಆಲಿಸಲು ನಾವಿಲ್ಲಿಗೆ ಬಂದಿದ್ದೇವೆ’ ಎಂದು ಹೇಳಿದರು. ಶುಕ್ರವಾರ ಈ ನಿಯೋಗವು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿಯನ್ನು ಭೇಟಿಯಾಗಿ ಮಾತುಕತೆ ನಡೆಸಿತ್ತು.
ಈ ಮಧ್ಯೆ, ಉಕ್ರೇನ್ ಸಂಘರ್ಷ ಕುರಿತಂತೆ ಆಫ್ರಿಕನ್ ನಿಯೋಗದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಿದ್ದು ಕೆಲವರು ಉಕ್ರೇನ್ ಪರ ವಹಿಸಿದರೆ, ಇನ್ನು ಕೆಲವರು ತಟಸ್ಥ ನಿಲುವು ಅಥವಾ ರಶ್ಯದ ಪರ ನಿಂತಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.







