ಸ್ಯಾಫ್ ಫುಟ್ಬಾಲ್: ಪಾಕಿಸ್ತಾನ ತಂಡದ ಆಗಮನ ವಿಳಂಬ
ಬೆಂಗಳೂರು: ವೀಸಾ ಸಮಸ್ಯೆಯ ಕಾರಣಕ್ಕೆ ಸ್ಯಾಫ್ ಫುಟ್ಬಾಲ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಪಾಕಿಸ್ತಾನ ತಂಡದ ಆಗಮನ ವಿಳಂಬವಾಗುತ್ತಿದೆ. ಆದರೆ ತಂಡವು ಭಾರತ ವಿರುದ್ಧ ಜೂನ್ 21ರಂದು ನಡೆಯಲಿರುವ ತನ್ನ ಮೊದಲ ಪಂದ್ಯಕ್ಕಿಂತ ಮೊದಲು ಭಾರತಕ್ಕೆ ತಲುಪುವ ನಿರೀಕ್ಷೆ ಇದೆ.
ಮಾರಿಷಸ್ನಲ್ಲಿ ಫೋರ್ ನೇಶನ್ ಕಪ್ ಪೂರ್ಣಗೊಳಿಸಿದ ನಂತರ ಪಾಕಿಸ್ತಾನ ಫುಟ್ಬಾಲ್ ತಂಡ ರವಿವಾರ ಬೆಂಗಳೂರಿಗೆ ತಲುಪಲಿದೆ. ಆದಾಗ್ಯೂ ತಂಡ ಈಗಲೂ ಮಾರಿಷಸ್ನಲ್ಲಿದೆ. ಇಂದು ಬೆಳಗ್ಗಿನ ನಿಗದಿತ ವಿಮಾನವನ್ನು ತಪ್ಪಿಸಿಕೊಂಡಿದೆ.
ಪಾಕಿಸ್ತಾನ ತಂಡವು ಜೂನ್ 21ರಂದು ರಾತ್ರಿ 7:30ಕ್ಕೆ ಶ್ರೀಕಂಠೀರವ ಸ್ಟೇಡಿಯಮ್ನಲ್ಲಿ ಭಾರತದೊಂದಿಗೆ ಸೆಣಸಾಡಲಿದೆ. ಪಾಕ್ ತಂಡದ ಆಗಮನದ ಕುರಿತಂತೆ ಯಾವುದೇ ಕಳವಳವಿಲ್ಲ ಎಂದು ಕೆಎಸ್ಎಫ್ಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತದ ಗೃಹ ವ್ಯವಹಾರಗಳ ಸಚಿವಾಲಯ ವಾರಾಂತ್ಯದಲ್ಲಿ ಮುಚ್ಚಲಾಗಿದೆ. ಪಾಕ್ ತಂಡದ ಅರ್ಜಿಯು ಮಾರಿಷಸ್ನ ಭಾರತ ರಾಯಭಾರ ಕಚೇರಿಯಲ್ಲಿದೆ. ನಾವು ಎಐಎಫ್ಎಫ್ನೊಂದಿಗೆ(ಅಖಿಲ ಭಾರತ ಫುಟ್ಬಾಲ್ ಫೆಡರೇಶನ್)ಸಂಪರ್ಕದಲ್ಲಿದ್ದೇವೆ. ಅವರು ರಾಯಭಾರ ಕಚೇರಿ ಹಾಗೂ ಪಾಕಿಸ್ತಾನ ಫುಟ್ಬಾಲ್ ಫೆಡರೇಶನ್(ಪಿಎಫ್ಎಫ್)ನೊಂದಿಗೆ ಸಂಪರ್ಕದಲ್ಲಿದ್ದಾರೆ.
ಪಾಕಿಸ್ತಾನದ ಆಟಗಾರರ ವೀಸಾ ಅರ್ಜಿಗಳನ್ನು ಸೋಮವಾರ ಪ್ರಕ್ರಿಯೆಗೊಳಿಸಲಾಗುವುದು. ಪಾಕ್ ತಂಡ ಸೋಮವಾರ ರಾತ್ರಿ ಅಥವಾ ಮಂಗಳವಾರ ಬೆಳಗ್ಗೆ ಪಂದ್ಯಕ್ಕೆ ಸರಿಯಾಗಿ ಬೆಂಗಳೂರಿಗೆ ಬಂದಿಳಿಯಲು ಸಾಧ್ಯವಾಗುತ್ತದೆ ಎಂದು ಕೆಎಸ್ಎಫ್ಎ ಉನ್ನತ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ತಂಡವು ಭಾರತಕ್ಕೆ ಪ್ರಯಾಣಿಸಲು ಎನ್ಒಸಿ ವಿಳಂಬವಾಗಿದೆ ಎಂದು ಪಿಎಫ್ಎಫ್ ದೇಶದ ಕ್ರೀಡಾ ಮಂಡಳಿಯನ್ನು ದೂಷಿಸಿತ್ತು. ಆದರೆ ಫೆಡರೇಶನ್ ಸಕಾಲದಲ್ಲಿ ದಾಖಲೆಗಳನ್ನು ಸಲ್ಲಿಸಲಿಲ್ಲ ಎಂದು ಮಂಡಳಿ ಹೇಳಿದೆ.
ಪಾಕಿಸ್ತಾನವು ಸ್ಯಾಫ್ ಟೂರ್ನಮೆಂಟ್ನಲ್ಲಿ ಭಾರತವಲ್ಲದೆ ಕುವೈತ್(ಜೂನ್ 24) ಹಾಗೂ ನೇಪಾಲ(ಜೂನ್ 27) ತಂಡಗಳನ್ನು ಗ್ರೂಪ್ ಎ ಪಂದ್ಯಗಳಲ್ಲಿ ಎದುರಿಸಲಿದೆ