ಆರ್ಚರಿ ವಿಶ್ವಕಪ್: ವೈಯಕ್ತಿಕ ವಿಭಾಗದಲ್ಲಿ ಚಿನ್ನ ಜಯಿಸಿದ ಅಭಿಷೇಕ್ ವರ್ಮಾ

ಹೊಸದಿಲ್ಲಿ: ಕೊಲಂಬಿಯಾದ ಮೆಡಿಲಿನ್ನಲ್ಲಿ ಶನಿವಾರ ನಡೆದ ಮೂರನೇ ಹಂತದ ಆರ್ಚರಿ ವಿಶ್ವಕಪ್ನಲ್ಲಿ ಅಭಿಷೇಕ್ ವರ್ಮಾ ಪುರುಷರ ಕಾಂಪೌಂಡ್ ವೈಯಕ್ತಿಕ ವಿಭಾಗದ ಫೈನಲ್ನಲ್ಲಿ ಜಯಶಾಲಿಯಾಗಿ ಚಿನ್ನದ ಪದಕ ಜಯಿಸಿದ್ದಾರೆ. 33ರ ಹರೆಯದ ಅಭಿಷೇಕ್ ಅವರು ಫೈನಲ್ನಲ್ಲಿ ಅಮೆರಿಕದ ಜೇಮ್ಸ್ ಲುಟ್ಝ್ ರನ್ನು 148-146 ಅಂತರದಿಂದ ಸೋಲಿಸಿದರು. ಈ ಮೂಲಕ ಭಾರತಕ್ಕೆ 2ನೇ ಚಿನ್ನದ ಪದಕ ಗೆದ್ದುಕೊಟ್ಟರು.
ಹಲವು ಬಾರಿ ವಿಶ್ವಕಪ್ನಲ್ಲಿ ಚಿನ್ನದ ಪದಕ ಜಯಿಸಿರುವ ಅಭಿಷೇಕ್, ಮೊದಲೆರಡು ಹಂತದ ವಿಶ್ವಕಪ್ನಿಂದ ವಂಚಿತರಾದ ನಂತರ ಮೂರನೇ ಹಂತದಲ್ಲಿ ಪುನರಾಗಮನ ಮಾಡಿದ್ದಾರೆ. ಈ ಮೊದಲು ವಿಶ್ವದ ನಂ.1 ಹಾಗೂ ಅಗ್ರ ಶ್ರೇಯಾಂಕದ ನೆದರ್ಲ್ಯಾಂಡ್ಸ್ನ ಮೈಕ್ ಸ್ಕ್ಲೋಸರ್ ಎದುರು 148-148ರಿಂದ ಸಮಬಲ ಸಾಧಿಸಿದ ನಂತರ ಶೂಟ್ ಆಫ್ ಜಯ ಸಾಧಿಸಿ ವೈಯಕ್ತಿಕ ವಿಭಾಗದಲ್ಲಿ ಸೆಮಿ ಫೈನಲ್ಗೆ ತಲುಪಿದ್ದರು. 8ನೇ ಶ್ರೇಯಾಂಕದ ಅಭಿಷೇಕ್ ಅಂತಿಮ-4ರ ಹಣಾಹಣಿಯಲ್ಲಿ ಬ್ರೆಝಿಲ್ನ ಲುಕಾಸ್ ಅಬ್ರೆವು ಅವರನ್ನು ಸೋಲಿಸಿದ್ದರು.ಈ ಮೂಲಕ ಫೈನಲ್ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದ್ದರು.
ಇದು ಅಭಿಷೇಕ್ ಪಾಲಿಗೆ ಮೂರನೇ ವಿಶ್ವಕಪ್ ವೈಯಕ್ತಿಕ ಚಿನ್ನದ ಪದಕವಾಗಿದೆ. 2021ರ ಪ್ಯಾರಿಸ್ ವಿಶ್ವಕಪ್ ನಂತರ ಮೊದಲ ಬಾರಿ ಚಿನ್ನ ಜಯಿಸಿದ್ದಾರೆ. 2015ರಲ್ಲಿ ಪೊಲ್ಯಾಂಡ್ನಲ್ಲಿ ತನ್ನ ಚೊಚ್ಚಲ ವೈಯಕ್ತಿಕ ವಿಶ್ವಕಪ್ ಪ್ರಶಸ್ತಿ ಜಯಿಸಿದ್ದರು. ವಿಶ್ವಕಪ್ನ ವೈಯಕ್ತಿಕ ವಿಭಾಗದಲ್ಲಿ ಎರಡು ಬೆಳ್ಳಿ ಹಾಗೂ ಕಂಚು ಕೂಡ ಜಯಿಸಿದ್ದರು.
ಭಾರತದ ಆರ್ಚರಿ ತಂಡ ಈ ತನಕ 1 ಚಿನ್ನ ಹಾಗೂ 3 ಕಂಚಿನ ಪದಕಗಳನ್ನು ಜಯಿಸಿದೆ. ರಿಕರ್ವ್ ಮಿಕ್ಸೆಡ್ ಟೀಮ್ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದೆ.
ಭಾರತ ತಂಡವು ಫ್ರಾನ್ಸ್ ಹಾಗೂ ನೆದರ್ಲ್ಯಾಂಡ್ಸ್ ತಂಡಗಳನ್ನು 6-0 ಅಂತರದಿಂದ ಮಣಿಸಿ ಸೆಮಿ ಫೈನಲ್ ತಲುಪಿತ್ತು. ಆದರೆ ಸೆಮಿ ಫೈನಲ್ನಲ್ಲಿ ಕೊರಿಯಾ ವಿರುದ್ಧ 3-5 ಅಂತರದಿಂದ ಸೋತಿತ್ತು. ಇದೀಗ ಕಂಚಿನ ಪದಕಕ್ಕಾಗಿ ಚೈನೀಸ್ ತೈಪೆ ತಂಡವನ್ನು ಎದುರಿಸಲಿದೆ.







