ಶಕ್ತಿ ಯೋಜನೆ ಎಫೆಕ್ಟ್: ತುಂಬಿ ತುಳುಕುತ್ತಿವೆ ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುವ ಸರಕಾರಿ ಬಸ್ ಗಳು!

ಬೆಳ್ತಂಗಡಿ, ಜೂ.19: ಶಕ್ತಿ ಯೋಜನೆ ಜಾರಿಯಾದ ಬೆನ್ನಲ್ಲೇ ಧಾರ್ಮಿಕ ಕೇಂದ್ರಗಳಿಗೆ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುತ್ತಿದ್ದು, ಧರ್ಮಸ್ಥಳದಲ್ಲಿ ಸೋಮವಾರ ಬೆಳಗ್ಗೆ ಭಕ್ತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ. ಬಸ್ಸಿಗೆ ಹತ್ತಲು ಜನರು ನೂಕುನುಗ್ಗಲು ನಡೆಸುತ್ತಿರುವುದು ಕಂಡುಬಂತು.
ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಹೋಗುವ ಬಸ್ಸುಗಳಲ್ಲಿ ಅತಿ ಹೆಚ್ಚಿನ ನೂಕು ನುಗ್ಗಲು ಕಂಡುಬರುತ್ತಿದೆ. ಸೋಮವಾರ ಬೆಳಗ್ಗಿನಿಂದಲೂ ಕೆಎಸ್ಸಾರ್ಟಿಸಿ ಬಸ್ಸುಗಳು ಮಿತಿ ಮೀರಿ ಜನರನ್ನು ತುಂಬಿಕೊಂಡು ಪ್ರಯಾಣ ಬೆಳೆಸುತ್ತಿರುವುದು ಕಂಡು ಬಂತು. ನೂರಕ್ಕೂ ಹೆಚ್ಚು ಪ್ರಯಾಣಿಕರು ಬಸ್ಸುಗಳಲ್ಲಿ ಪ್ರಯಾಣಿಸುತ್ತಿರುವುದಾಗಿ ಚಾಲಕ, ನಿರ್ವಾಹಕರು ಮಾಹಿತಿ ನೀಡುತ್ತಿದ್ದಾರೆ.
ಬಸ್ಸಿನೊಳಗೆ ಹತ್ತಲು ಜನರ ನೂಕು ನುಗ್ಗಲು ಕಂಡು ಬರುತ್ತಿದ್ದು, ಪ್ರಯಾಣಿಕರು ಪರಸ್ಪರ ಜಗಳ ಮಾಡಿಕೊಳ್ಳುವಂತಾಗಿದೆ. ಬಸ್ಸುಗಳ ಬಾಗಿಲು ಮೂಲಕ ಹತ್ತಲು ಸಾಧ್ಯವಾಗದೆ ಕಿಟಕಿಗಳ ಮೂಲಕವೂ ಬಸ್ಸಿನೊಳಗೆ ಪ್ರವೇಶಿಸಲು ಪ್ರಯತ್ನ ನಡೆಸುತ್ತಿರುವುದು ಕಂಡುಬಂತು.
ಸಾಮಾನ್ಯವಾಗಿ ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಅರ್ಧ ಗಂಟೆಗೊಂದರಂತೆ ಬಸ್ಸು ಬಿಡಲಾಗುತ್ತಿದೆ. ಪ್ರಯಾಣಿಕರು ಹೆಚ್ಚು ಇದ್ದಾಗ ವಿಶೇಷ ಬಸ್ಸುಗಳು ಆಗಾಗ ಸಂಚರಿಸುತ್ತವೆ. ಆದರೆ ಈಗ ಅದು ಯಾವುದೂ ಸಾಕಾಗುತ್ತಿಲ್ಲ. ಬೆಳಗ್ಗೆ ಸ್ಕೂಲ್ ಟ್ರಿಪ್ ಗಳು ಇದ್ದ ಕಾರಣ ಬಸ್ಸುಗಳ ಕೊರತೆಯಿದೆ. ಇದರಿಂದಾಗಿ ಹೆಚ್ಚಿನ ಬಸ್ಸುಗಳನ್ನು ಓಡಾಟ ಸಾಧ್ಯವಾಗಿಲ್ಲ. ಆದ್ದರಿಂದ ಇರುವ ಬಸ್ಸುಗಳಲ್ಲಿ ಹೆಚ್ವಿನ ಜನ ಪ್ರಯಾಣಿಸುವಂತಾಗಿದೆ. ನೂಕು ನುಗ್ಗಲು ಉಂಟಾಗುತ್ತಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ