BJP ನಾಯಕರ ಜೊತೆಗಿರುವ ಕಾನ್ಸ್ಟೇಬಲ್ ಹತ್ಯೆ ಆರೋಪಿಯ ಫೋಟೊ ಹಂಚಿಕೊಂಡ ಸಚಿವ ಪ್ರಿಯಾಂಕ್ ಖರ್ಗೆ
''ದುಷ್ಟ ಶಕ್ತಿಗಳಿಗೆಲ್ಲ ಬಿಜೆಪಿಯೇ ತವರು ಮನೆಯಾಗಿರುವುದೇಕೆ? ''

ಬೆಂಗಳೂರು: ಕಲಬುರಗಿ ಜಿಲ್ಲೆಯಲ್ಲಿ ಅಕ್ರಮ ಮರುಳು ಸಾಗಾಣಿಕೆಗೆ ತಡೆ ಹಾಕಲು ಬಂದಿದ್ದ ಹೆಡ್ ಕಾನ್ಸ್‌ಸ್ಟೇಬಲ್ ಪೊಲೀಸ್ ಪೇದೆ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಯೋರ್ವ ಬಿಜೆಪಿ ನಾಯಕರ ಜೊತೆಗಿದ್ದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಿಜೆಪಿ ನಾಯಕ ರವಿಕುಮಾರ್ ಜೊತೆಗಿರುವ ಆರೋಪಿಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
''ಮಾನ್ಯ ಆರಗ ಜ್ಞಾನೇಂದ್ರ ಅವರೇ, ದುಷ್ಟ ಶಕ್ತಿಗಳಿಗೆಲ್ಲ ಬಿಜೆಪಿಯೇ ತವರು ಮನೆಯಾಗಿರುವುದೇಕೆ? ಅಂದಹಾಗೆ, ಪೇದೆ ಕೊಂದವನು ನಿಮ್ಮ ಪಕ್ಷದ ಕಾರ್ಯಕರ್ತ ಎಂಬುದನ್ನು ರವಿಕುಮಾರ್ ಅವರನ್ನು ಕೇಳಿ ತಿಳಿದುಕೊಳ್ಳಿ'' ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ತಿರುಗೇಟು ನೀಡಿದ್ದಾರೆ.
''ನಿಮ್ಮದೇ ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿನೀಯರಿಗೆ ವಂಚಿಸಿ ಬ್ಲಾಕ್ಮೇಲ್ ಮಾಡಿದ ದುಷ್ಟನ ಬಗ್ಗೆ ತಾವು ಮಾತಾಡುವುದಿಲ್ಲವೇಕೆ? ಆತ ಹಿಂದೆ ನಿಮ್ಮ ಮನೆಯ ಮೇಲೆ ದಾಳಿ ಮಾಡಿದ ದುಷ್ಟಶಕ್ತಿಯ ಗುಂಪಿಗೆ ಸೇರಿದವನು ಎಂಬುದಕ್ಕೆ ಭಯವೇ? ನಮ್ಮ ಸರ್ಕಾರ ಬಂದು ಒಂದು ತಿಂಗಳಾಗಿದೆ ಅಷ್ಟೇ, ಇನ್ನು ಕೆಲವೇ ದಿನಗಳಲ್ಲಿ ಕಲ್ಬುರ್ಗಿಯಷ್ಟೇ ಅಲ್ಲ, ಕರ್ನಾಟಕದಲ್ಲಿ ದುಷ್ಟಶಕ್ತಿ ಮುಕ್ತ ಮಾಡುತ್ತೇವೆ. ಕಲ್ಬುರ್ಗಿಯಲ್ಲಿ ನಿಮ್ಮ ಪಕ್ಷದ ಕಾರ್ಯಕರ್ತ ಪೇದೆಯನ್ನು ಕೊಲೆ ಮಾಡಿದ್ದಲ್ಲದೆ, ಬಂಧಿಸಿದ ಪೊಲೀಸರಿಗೆ ಚಾಕು ಹಾಕಲು ಹೋಗಿ ಗುಂಡೇಟು ತಿಂದು ಬಂಧಿಯಾಗಿದ್ದಾನೆ. ತಾವು ಆತನಿಗೆ ಜಾಮೀನು ನೀಡಿ ಬಿಡಿಸಲು ಪ್ರಯತ್ನಿಸದಿದ್ದರೆ ಸಾಕು, ಅದೇ ತಾವು ಕರ್ನಾಟಕಕ್ಕೆ ಮಾಡುವ ಉಪಕಾರ'' ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ಮಾನ್ಯ @JnanendraAraga ಅವರೇ,
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) June 18, 2023
ದುಷ್ಟ ಶಕ್ತಿಗಳಿಗೆಲ್ಲ ಬಿಜೆಪಿಯೇ ತವರು ಮನೆಯಾಗಿರುವುದೇಕೆ?
ಅಂದಹಾಗೆ, ಪೇದೆ ಕೊಂದವನು ನಿಮ್ಮ ಪಕ್ಷದ ಕಾರ್ಯಕರ್ತ ಎಂಬುದನ್ನು ರವಿಕುಮಾರ್ ಅವರನ್ನು ಕೇಳಿ ತಿಳಿದುಕೊಳ್ಳಿ!
ನಿಮ್ಮದೇ ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿನೀಯರಿಗೆ ವಂಚಿಸಿ ಬ್ಲಾಕ್ಮೇಲ್ ಮಾಡಿದ ದುಷ್ಟನ ಬಗ್ಗೆ ತಾವು ಮಾತಾಡುವುದಿಲ್ಲವೇಕೆ? ಆತ… pic.twitter.com/DE6Uu63P18







