ತಿಪ್ಪಣ್ಣಪ್ಪ ಕಮಕನೂರುಗೆ ಒಲಿದ ಕಾಂಗ್ರೆಸ್ ಟಿಕೆಟ್; ಇವರ ಕಿರು ಪರಿಚಯ ಇಲ್ಲಿದೆ...
ವಿಧಾನ ಪರಿಷತ್ ಉಪ ಚುನಾವಣೆ

ಬೆಂಗಳೂರು, ಜೂ.19: ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವ ಎನ್.ಎಸ್.ಬೋಸರಾಜು ಹಾಗೂ ತಿಪ್ಪಣ್ಣಪ್ಪ ಕಮಕನೂರು ಅವರಿಗೆ ಅವಕಾಶ ಕಲ್ಪಿಸಲಾಗಿದೆ.
ಕಲಬುರಗಿ ಮೂಲದವರಾಗಿರುವ ತಿಪ್ಪಣ್ಣ ಕಮಕನೂರು ಅವರು ಕೋಲಿ ಸಮಾಜಕ್ಕೆ ಸೇರಿದವರಾಗಿದ್ದು, ಮಾಜಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.
ರಾಜ್ಯ ಕೋಲಿ ಗಂಗಾಮತ ಸಮಾಜದ ಗೌರವಾಧ್ಯಕ್ಷರೂ ಆಗಿರುವ ಕಮಕನೂರ್ ಗೆ ಕಾಂಗ್ರೆಸ್ ಮತ್ತೊಮ್ಮೆ ಅವಕಾಶ ನೀಡಿದೆ.
ಈ ಹಿಂದೆ ಪರಿಷತ್ ಸದಸ್ಯರಾಗಿದ್ದ ಕಮಕನೂರ್
2018ರ ಡಿಸೆಂಬರ್ ನಲ್ಲಿ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ವಿ.ಎಸ್.ಉಗ್ರಪ್ಪ ಗೆಲುವು ಸಾಧಿಸಿದ್ದರು. ವಿಧಾನ ಪರಿಷತ್ ಸದಸ್ಯರಾಗಿದ್ದ ಅವರು ಸಂಸದರಾಗಿ ಆಯ್ಕೆಯಾದ ಬಳಿ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ವಿ.ಎಸ್.ಉಗ್ರಪ್ಪ ಅವರ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ತಿಪ್ಪಣ್ಣ ಕಮಕನೂರು ಅವರನ್ನು ನೇಮಕ ಮಾಡಿ ಸರ್ಕಾರ ರಾಜ್ಯಪಾಲರಿಗೆ ಶಿಫಾರಸು ಕಳುಹಿಸಿತ್ತು. ಇವರ ಸದಸ್ಯತ್ವ ಅವಧಿ 2020ನೇ ಸಾಲಿನ ಜೂನ್‌ವರೆಗೆ ಇತ್ತು.
ಬಾಬುರಾವ್ ಚಿಂಚನಸೂರ್ ಬದಲಿಗೆ ಕಮಕನೂರ್ ಗೆ ಟಿಕೆಟ್?:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಿಷತ್ ಸ್ಥಾನಕ್ಕೆ ರಾಜಿನಾಮೆ ನೀಡಿ ಸ್ಪರ್ಧೆ ಮಾಡಿ ಸೋಲನುಭವಿಸಿದ್ದ ಬಾಬುರಾವ್ ಚಿಂಚನಸೂರ್ ಸ್ಥಾನಕ್ಕೆ ಈಗ ತಿಪ್ಪಣ್ಣ ಕಮಕನೂರ್ ಅವರನ್ನು ಆಯ್ಕೆ ಮಾಡಲಾಗಿದೆ. ಬಾಬುರಾವ್ ಚಿಂಚನಸೂರ್ ಅವರಿಗೆ ಅನಾರೋಗ್ಯದ ಕಾರಣ ಕಾಂಗ್ರೆಸ್ ಟಿಕೆಟ್ ಕೈತಪ್ಪಿದೆ ಎನ್ನಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚನೆಯಂತೆ ತಿಪ್ಪಣ್ಣ ಕಮಕನೂರುಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಲಾಗುತ್ತಿದ್ದು, ಕೋಲಿ ಸಮಾಜದ ಮತ್ತೊಬ್ಬ ನಾಯಕ ತಿಪ್ಪಣ್ಣ ಕಮಕನೂರುಗೆ ರಾಜ್ಯ ರಾಜಕಾರಣಕ್ಕೆ ಪ್ರವೇಶ ಮಾಡಲು ಅವಕಾಶ ಮಾಡಿಕೊಡಲಾಗಿದೆ.







