ಕುಷ್ಟ ರೋಗ ನಿರ್ಮೂಲನಾ ಅಭಿಯಾನದಲ್ಲಿ ಖಾಸಗಿ ವೈದ್ಯರನ್ನು ಸೇರಿಸಿಕೊಳ್ಳಿ: ಗಿರೀಶ್ ನಂದನ್

ಪುತ್ತೂರು: ಇಂದಿನಿಂದ ಜು. 6ರ ತನಕ ತಾಲೂಕಿನಾದ್ಯಂತ ನಡೆಯಲಿರುವ ಕುಷ್ಟ ರೋಗ ನಿವಾರಣಾ ಅಭಿಯಾನದಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರನ್ನು ಸೇರಿಸಿಕೊಳ್ಳಬೇಕು. ಮನೆ ಭೇಟಿ ಸಂದರ್ಭದಲ್ಲಿ ಮನೆಗಳಿಗೆ ಮೊದಲೇ ಮಾಹಿತಿ ನೀಡಬೇಕು. ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಮಾಹಿತಿ ಶಿಬಿರ ಗಳನ್ನು ನಡೆಸಬೇಕು. ಜನರ ಮನವೊಲಿಕೆ ಮಾಡಿ ರೋಗಲಕ್ಷಣ ಪತ್ತೆ ಮಾಡಿ ಎಂದು ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಗಿರೀಶ್ ನಂದನ್ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ಜೂ. 19ರಿಂದ ಜು. 6ರ ತನಕ ನಡೆಯಲಿ ರುವ ಅಭಿಯಾನಕ್ಕೆ ಸಂಬಂಧಿಸಿದಂತೆ ಸೋಮವಾರ ಪುತ್ತೂರಿನ ಮಿನಿವಿಧಾನ ಸೌಧದ ಸಹಾಯಕ ಕಮಿಷನರ್ ನ್ಯಾಯಾಲಯದ ಸಭಾಂಗಣದಲ್ಲಿ ಸಹಾಯಕ ಕಮೀಷನರ್ ಗಿರೀಶ್ ನಂದನ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಗಿರೀಶ್ ನಂದನ್ ಅವರು ಈ ಅಭಿಯಾನದಲ್ಲಿ ಖಾಸಗಿ ವೈದ್ಯರು, ಚರ್ಮರೋಗ ತಜ್ಞ ವೈದ್ಯರನ್ನು ಬಳಸಿಕೊಂಡು ಯೋಜನೆಯನ್ನು ಕಾರ್ಯಗತಗೊಳಿಸಬೇಕು. ಮನೆ ಭೇಟಿಯ ವಿಚಾರವನ್ನು ಮೊದಲೇ ಮನೆಗಳಿಗೆ ತಿಳಿಸಿ ಅವರಿಗೆ ಸಮಗ್ರ ಮಾಹಿತಿ ನೀಡಬೇಕು. ಜನರ ಮನವೊಲಿಸುವ ಕೆಲಸವನ್ನು ಇಲಾಖೆಯ ಅಧಿಕಾರಿಗಳು ಮಾಡಬೇಕು. ಅಲ್ಲದೆ ಶಾಲೆ ಕಾಲೇಜ್‍ಗಳಲ್ಲಿ ಕುಷ್ಟ ರೋಗದ ನಿರ್ಮೂಲನೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಅಭಿಯಾನದ ಬಗ್ಗೆ ಪಿಪಿಟಿ ಮೂಲಕ ಮಾಹಿತಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಅವರು ಪುತ್ತೂರು ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಮತ್ತೆ ಕುಷ್ಟರೋಗ ಕಾಣಿಸಿಕೊಂಡಿದ್ದು, ಪ್ರಸ್ತುತ ವರ್ಷ ಅದರ ಪ್ರಮಾಣದಲ್ಲಿ ಏರಿಕೆ ಕಂಡಿದೆ. 2021ರಲ್ಲಿ ಮೊದಲು ಪುತ್ತೂರು ತಾಲೂಕಿನಲ್ಲಿ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. 21ರಲ್ಲಿ 2 ಪ್ರಕರಣಗಳು ಪತ್ತೆಯಾಗಿದ್ದವು. ಈ ವರ್ಷ 6 ಪ್ರಕರಣಗಳು ಪತ್ತೆಯಾಗಿವೆ. ಪತ್ತೆಯಾಗಿರುವ 6 ಕುಷ್ಟರೋಗ ಪೀಡಿತರ ಪೈಕಿ ಮೂರು ಮಂದಿ ಗುಣಮುಖರಾಗಿದ್ದಾರೆ. ಉಳಿದ 3 ಮಂದಿಗೆ ಚಿಕಿತ್ಸೆ ನಡೆಯುತ್ತಿದೆ. ಪುತ್ತೂರು ತಾಲೂಕಿನ ತಿಂಗಳಾಡಿ ಪ್ರಾಥಮಿಕ ಆರೋಗ್ಯ ವ್ಯಾಪ್ತಿಯಲ್ಲಿ ಎರಡು ಕುಷ್ಟರೋಗ ಪೀಡಿತರು ಹಾಗೂ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಓರ್ವ ಕುಷ್ಟರೋಗ ಲಕ್ಷಣ ಹೊಂದಿರುವ ವ್ಯಕ್ತಿ ಪತ್ತೆಯಾಗಿದ್ದಾರೆ. ಈ ಮೂವರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖಾ ಸಿಬಂಧಿಗಳು(ಮೇಲ್ ಒಲೆಂಟಿಯರ್ಸ್) ಮನೆ ಮನೆ ಭೇಟಿ ನಡೆಸಿ ರೋಗ ಲಕ್ಷಣಗಳ ಬಗ್ಗೆ ಪ್ರತಿಯೊಬ್ಬರನ್ನು ವೈಯಕ್ತಿಕವಾಗಿ ತಪಾಸಣೆ ನಡೆಸಲಿದ್ದಾರೆ. ರೋಗ ಲಕ್ಷಣಗಳು ಕಂಡು ಬಂದಲ್ಲಿ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕೆ ಜನತೆಯ ಸಹಕಾರ ಬೇಕಾಗಿದೆ ಎಂದು ತಿಳಿಸಿದರು.
ದೇಹದ ಮೇಲಿರುವ ಕಪ್ಪು ಚುಕ್ಕೆಗಳು ಹಾಗೂ ಬಿಳಿಬಣ್ಣದ ಚುಕ್ಕೆಗಳು ಕಂಡು ಬಂದರೆ ಅಂತಹ ವ್ಯಕ್ತಿಗಳು ತಕ್ಷಣವೇ ವೈದ್ಯರನ್ನು ಕಾಣಬೇಕು. ಇದು ಕುಷ್ಟರೋಗದ ಲಕ್ಷಣವಾಗಿರುವ ಸಾಧ್ಯತೆ ಇದೆ. ಕುಷ್ಟ ರೋಗದ ಬಗ್ಗೆ ಜನತೆಯಲ್ಲಿ ಮೂಢನಂಬಿಕೆ ಇದೆ. ಇದು ದೇವರ ಶಾಪ ಎಂಬ ನಂಬಿಕೆ ಇದೆ. ಈ ರೋಗ ಯಾವುದೇ ದೇವರ ಶಾಪವಲ್ಲ ಇದೊಂದು ಗುಣವಾಗಬಲ್ಲ ರೋಗ ಎಂಬುದು ಜನರು ಅರಿತುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಕುಷ್ಟರೋಗ ನಿವಾರಣಾ ಅಭಿಯಾನದಡಿಯಲ್ಲಿ ಈ ಶಾಲಾ ಕಾಲೇಜುಗಳಲ್ಲಿ ಮಾಹಿತಿ ಅರಿವು ಕಾರ್ಯಕ್ರಮ ನಡೆಸಲಾಗುವುದು. ದೇಹದ ಮುಂಭಾಗದಲ್ಲಿ ಕಂಡು ಬರುವ ಮಚ್ಚೆಗಳು ಜನತೆಯ ಅರಿವಿಗೆ ಬರು ತ್ತದೆ. ಆದರೆ ವ್ಯಕ್ತಿಯ ದೇಹದ ಹಿಂಭಾಗದಲ್ಲಿ ಈ ಮಚ್ಚೆಗಳಿದ್ದರೆ ಅದನ್ನು ಕಾಣಲು ಸಾಧ್ಯವಾಗುತ್ತಿಲ್ಲ. ಇದೀಗ ಆಶಾ ಕಾರ್ಯಕರ್ತೆಯರು ಹಾಗೂ ಸ್ವಯಂಸೇವಕರು ಮನೆ ಭೇಟಿಗೆ ಬಂದಾಗ ಅದನ್ನು ಗುರುತಿಸಿ ಪತ್ತೆ ಹಚ್ಚಲಿದ್ದಾರೆ. ಈ ನಿಟ್ಟಿನಲ್ಲಿ ಜನತೆಯ ಪೂರ್ಣ ಸಹಕಾರ ಬೇಕಾಗಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಕೆ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ, ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಪರಿವೀಕ್ಷ ಣಾಧಿಕಾರಿ ಸುಂದರ ಗೌಡ, ಡಾ. ಭವ್ಯಾ, ಡಾ.ಶಿಶಿರ, ಡಾ,ಕೃಷ್ಣಾನಂದ ಮತ್ತಿತರರು ಉಪಸ್ಥಿತರಿದ್ದರು.
ಹಿರಿಯ ಆರೋಗ್ಯ ನಿರೀಕ್ಷಕಿ ಪದ್ಮಾವತಿ ಸ್ವಾಗತಿಸಿ, ವಂದಿಸಿದರು.