ಶವ ಮರಣೋತ್ತರ ಪರೀಕ್ಷೆಗೆ ಲಂಚ ಪ್ರಕರಣ ಆರೋಪ: ದೂರುದಾರ ಕಲಿಯುಗ ಸೇವಾ ಸಮಿತಿಯಿಂದ ಸ್ಪಷ್ಟನೆ

ಪುತ್ತೂರು : ಪುತ್ತೂರಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಮರಣೋತ್ತರ ಪರೀಕ್ಷೆ ನಡೆಸುತ್ತಿರುವ ಸಿಬ್ಬಂದಿ ಹಣದ ಬೇಡಿಕೆಯಿಟ್ಟು ಮೃತರ ಸಂಬಂಧಿಕರಿಂದ ಹಣ ಪಡೆಯುತ್ತಿದ್ದಾರೆ ಎಂಬುವುದಕ್ಕೆ ನಮ್ಮ ಬಳಿ ಪ್ರತ್ಯಕ್ಷ ಸಾಕ್ಷಿ ಇದೆ. ಆರೋಗ್ಯಾಧಿಕಾರಿಗಳು ಹೇಳಿಕೆ ನೀಡಿರುವಂತೆ ನಾವು ಆಧಾರ ರಹಿತ ಆರೋಪ ಮಾಡಿಲ್ಲ. ಸಿಬ್ಬಂದಿ ಲಂಚ ಕೇಳಿರುವ ಬಗ್ಗೆ ಹಾಗೂ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲು ಸತಾಯಿಸಿರುವ ಬಗ್ಗೆ ನಮ್ಮಲ್ಲಿ ಪ್ರತ್ಯಕ್ಷ ಸಾಕ್ಷಿ ಇದೆ ಎಂದು ಕಲಿಯುಗ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಜೈನ್ ಹೇಳಿದರು.
ಅವರು ಸೋಮವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಚಿಕ್ಕಮುಡ್ನೂರು ಗ್ರಾಮದ ಬೀರ್ನಹಿತ್ಲು ಎಂಬಲ್ಲಿ ಏಕಾಂಗಿಯಾಗಿ ವಾಸ್ತವ್ಯವಿದ್ದ ಮೋನಪ್ಪ ಪೂಜಾರಿ ಎಂಬವರು ಕಳೆದ ಮೇ 25ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರದ್ದು ತೀರಾ ಬಡ ಕುಟುಂಬವಾಗಿದ್ದು, ಶವ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯ ಸಿಬ್ಬಂದಿ 3 ಸಾವಿರ ರೂ. ಲಂಚದ ಬೇಡಿಕೆ ಮುಂದಿಟ್ಟಿದ್ದಾರೆ. ರೂ.1500 ಕೊಡುತ್ತೇವೆ ಎಂದು ಮೋನಪ್ಪ ಪೂಜಾರಿ ಅವರ ಸಂಬಂಧಿಕರು ಹೇಳಿಕೊಂಡಿದ್ದರೂ ಇನ್ನಷ್ಟು ಹಣ ಕೊಡಬೇಕು ಎಂಬ ಬೇಡಿಕೆಯಿಟ್ಟು ಬೆಳಿಗ್ಗೆ 11 ಗಂಟೆಗೆ ಶವಾಗಾರಕ್ಕೆ ತಂದಿಡಲಾದ ಶವವನ್ನು ಸಂಜೆ 6.30ರ ತನಕವೂ ಮರಣೋತ್ತರ ಪರೀಕ್ಷೆಗೊಳಪಡಿಸದೆ ಸತಾಯಿಸಿದ್ದಾರೆ. ಇದಕ್ಕೆ ವೀರಪ್ಪ ಪೂಜಾರಿ ಅವರೇ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ನಾವು ಯಾವುದೇ ವೈದ್ಯರ ಬಗ್ಗೆ ಆರೋಪಿಸಿಲ್ಲ. ಮರಣೋತ್ತರ ಪರೀಕ್ಷೆ ನಡೆಸುವ ಸಿಬ್ಬಂದಿಗಳು ಲಂಚ ಕೇಳುತ್ತಾರೆ. ಅದನ್ನು ಸರಿಪಡಿಸಿ ಎಂದು ಶಾಸಕರು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಈ ವಿಚಾರವನ್ನು ಅಂದೇ ಮೃತ ಮೋನಪ್ಪ ಪೂಜಾರಿ ಅವರ ಸಂಬಂಧಿಕರು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆಶಾ ಅವರ ಗಮನಕ್ಕೆ ತಂದಿದ್ದರು. ಆ ವೇಳೆ ಅವರು ಲಿಖಿತವಾಗಿ ದೂರು ಕೊಡಿ ಎಂದು ತಿಳಿಸಿದ್ದರು. ಬಡವರಿಗೆ ಅನ್ಯಾಯವಾಗಬಾರರು ಎಂಬ ಸಾರ್ವಜನಿಕ ಹಿತಾಸಕ್ತಿಯಿಂದ ನಾವು ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮತ್ತು ಶಾಸಕರಿಗೆ ದೂರು ನೀಡಿದ್ದೆವು. ನಾವು ಸಿಬ್ಬಂದಿ ವಿರುದ್ಧ ಆಧಾರ ರಹಿತ ಆರೋಪ ಮಾಡಿಲ್ಲ. ವೈದ್ಯರ ಮೇಲೆ ಆರೋಪವೇ ಮಾಡಿಲ್ಲ ಎಂದರು.
ಇದನ್ನೇ ಮುಂದಿಟ್ಟುಕೊಂಡು ಜೂ. 17ರಂದು ಆಸ್ಪತ್ರೆಯ ಮರಣೋತ್ತರ ಪರೀಕ್ಷೆ ನಡೆಸುವ ಸಿಬ್ಬಂದಿಗಳು 2 ಶವಗಳ ಮರಣೋತ್ತರ ಪರೀಕ್ಷೆಗೆ ಸಹಕರಿಸದೆ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾಧ್ಯಮದೊಂದಿಗೆ ನಾವು ಕೇಳಿ ಲಂಚ ಪಡೆಯುತ್ತಿಲ್ಲ, ಕೊಟ್ಟದ್ದನ್ನು ಪಡೆದುಕೊಳ್ಳುತ್ತೇವೆ. ನಮ್ಮ ಮೇಲೆ ಆಧಾರ ರಹಿತ ಆರೋಪ ಮಾಡಲಾಗಿದೆ ಎಂದು ನಮ್ಮ ಮೇಲೆ ಆರೋಪ ಮಾಡಿದ್ದಾರೆ. ಅಲ್ಲದೆ ವೈದ್ಯರು ಕೂಡಾ ತಮ್ಮ ಸಿಬ್ಬಂದಿಗಳನ್ನು ಬೆಂಬಲಿಸಿ ಹೇಳಿಕೆ ನೀಡಿ ಲಂಚಕ್ಕೆ ಪ್ರೋತ್ಸಾಹ ನೀಡುವ ಮಾತುಗಳನ್ನಾಡಿದ್ದಾರೆ. ಸದಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕಲಿಯಗ ಸೇವಾ ಸಮಿತಿಯ ಹೋರಾಟದ ನೈತಿಕತೆಯನ್ನು ಕುಗ್ಗಿಸುವಂತೆ ವೈದ್ಯರು ಮಾಡಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕಲಿಯುಗ ಸೇವಾ ಸಮಿತಿ ಅಧ್ಯಕ್ಷ ಪದ್ಮನಾಭ ಪ್ರಭು, ಜೊತೆ ಕಾರ್ಯದರ್ಶಿಗಳಾದ ಸಂತೋಷ್ ಕುಮಾರ್ ಮತ್ತು ಸುರೇಂದ್ರ ಪೂಜಾರಿ ಹಾಗೂ ಲಂಚ ಸ್ವೀಕರಿಸಿದ್ದಕ್ಕೆ ಸಾಕ್ಷಿದಾರ ಎನ್ನಲಾದ ವೀರಪ್ಪ ಪೂಜಾರಿ ಉಪಸ್ಥಿತರಿದ್ದರು.