ಕೋಡಿಂಬಾಡಿ ಗ್ರಾಮಸ್ಥರು ತಲೆತಗ್ಗಿಸುವ ಕೆಲಸವನ್ನು ಎಂದಿಗೂ ಮಾಡಲಾರೆ: ಶಾಸಕ ಅಶೋಕ್ ರೈ
ಶಾಸಕ ಅಶೋಕ್ ರೈಗೆ ಹುಟ್ಟೂರಲ್ಲಿ ಸನ್ಮಾನ

ಪುತ್ತೂರು: 20 ವರ್ಷ ಬಿಜೆಪಿಯಲ್ಲಿ ಸಕ್ರೀಯನಾಗಿದ್ದ ತಾನು ಈ ಬಾರಿ ಬಿಜೆಪಿಯಲ್ಲಿ ಟಿಕೆಟ್ ಕೇಳಿದ್ದರೂ ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷವನ್ನು ಸೇರಿದೆ, ಅವಕಾಶ ಸಿಕ್ಕಿತ್ತು, ಗೆದ್ದು ಶಾಸಕನಾದೆ. ನಾನು ಹಣ ಮಾಡಬೇಕೆಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದಿಲ್ಲ, ಬಡವರ ಸೇವೆ ಮಾಡಬೇಕು ಎಂಬ ಏಕೈಕ ಉದ್ದೇಶದಿಂದ ರಾಜಕೀಯ ಸೇರಿದೆ. ಹುಟ್ಟೂರಿನ ಗ್ರಾಮಸ್ಥರು ಸಹಕಾರ ನಾನು ನಂಬುವ ತಾಯಿ ಮಹಿಷ ಮರ್ಧಿನಿಯ ಆಶೀರ್ವಾದದಿಂದ ನಾನು ಇಂದು ಪುತ್ತೂರು ಕ್ಷೇತ್ರದ ಶಾಸಕನಾಗಿ ನಿಮ್ಮ ಮುಂದೆ ನಿಂತಿದ್ದೇನೆ. ನಿಮ್ಮ ಮೇಲೆ ನನಗೆ ಋಣ ಇದೆ ಅದನ್ನು ತೀರಿಸುವ ಕೆಲಸವನ್ನು ಮಾಡುತ್ತೇನೆ ಮತ್ತು ಕೋಡಿಂಬಾಡಿ ಗ್ರಾಮದ ಜನತೆ ತಲೆತಗ್ಗಿಸುವ ಕೆಲಸವನ್ನು ಎಂದಿಗೂ ಮಾಡಲಾರೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ರವಿವಾರ ಸಂಜೆ ಕೋಡಿಂಬಾಡಿ ಶ್ರೀ ಮಹಿಷಮರ್ಧಿನಿ ದೆವಸ್ಥಾನದ ಸಭಾಂಗಣದಲ್ಲಿ ಶಾಸಕರಿಗೆ ಗ್ರಾಮಸ್ಥರು ಆಯೋಜಿಸಿದ ಹುಟ್ಟೂರತ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಯಾರೇ ಅಧಿಕಾರಿಯಾಗಲಿ ಯಾರಿದಂಲೂ ಲಂಚ ಕೇಳಬಾರದು. ಲಂಚ ಕೇಳಿದರೆ ಆ ವಿಚಾರವನ್ನು ನಾನು ಗಂಭೀರವಾಗಿ ಪರಿಗಣಿಸುವೆ. ಬಡವರು ಕೆಲಸ ಮಾಡಿಸಲು ಬಂದರೆ ಅದನ್ನು ಮಾಡಿಕೊಡಿ. ಕೆಲಸಕ್ಕಾಗಿ ಲಂಚ ಕೇಳಿದ ಗ್ರಾಮಕರನಿಕಗೆ ಕರೆ ಮಾಡಿ ಪ್ರಶ್ನಿಸಿದ್ದೇನೆ. 30 ಸಾವಿರ ಲಂಚ ಪಡೆದುಕೊಂಡಿರುವ ಬಗ್ಗೆ ಗಮನಕ್ಕೆ ಬಂದಿತ್ತು. ಕರೆ ಮಾಡಿ ಆ ಹಣವನ್ನು ಮರಳಿಸುವಂತೆ ಸೂಚನೆ ನೀಡಿದ್ದೇನೆ. ಸೇಂದಿ ಮಾರಾಟ ಮಾಡುವಾತನಿಂದ ಅಬಕಾರಿಯವರು 50 ಸಾವಿರ ಲಂಚ ಪಡೆದುಕೊಂಡಿದ್ದು ಮಾತ್ರವಲ್ಲದೆ ಸೇಂದಿ ಮಾರುವಾತನ ವಾಹವನ್ನು ಸೀಝ್ ಮಾಡಿದ್ದರು. ಈ ಲಂಚ ಪಡೆದ ಹಣವನ್ನು ಅಬಕಾರಿ ಅಧಿಕಾರಿ ಮೂಲಕವೇ ಮರಳಿಸಿದ್ದೇನೆ. ಭೃಷ್ಟಾಚಾರವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಫ್ಲಾಟಿಂಗ್, 94 ಸಿ, 94 ಸಿಸಿ, ಕಟ್ ಕನ್ವಶರ್ನ ಹೀಗೇ ಕಂದಾಯ ಇಲಾಖೆಗೆ ಸಂಬಂಧಿಸಿದ ವಿಚಾರಕ್ಕೆ ಇಲ್ಲಿ ಲಂಚಗಳು ನಡೆಯುತ್ತದೆ ಎಂಬ ವಿಚಾರ ಗಮನಕ್ಕೆ ಬಂದಿದೆ ಎಂದು ಶಾಸಕರು ಹೇಳಿದರು.
ತಾಲೂಕಿನ ಎಲ್ಲಾ ಅಧಿಕಾರಿಗಳ ಬಗ್ಗೆ ನನಗೆ ಅಪಾರ ಗೌರವ ಇದೆ. ಅಧಿಕಾರಿಗಳು ಇಲ್ಲದೇ ಇದ್ದರೆ ಯಾವ ಕೆಲಸವೂ ಆಗುವುದಿಲ್ಲ. ನಿಷ್ಟಾವಂತ ಅಧಿಕಾರಿಗಳಿಂದಾಗಿ ಅನೇಕ ಅಭಿವೃದ್ಧಿ ಪರ ಹೊಸ ಹೊಸ ಆಲೋಚನೆ ಗಳು ಮೂಡಿಬರುತ್ತದೆ. ಜನರ ಕೆಲಸವನ್ನು ಸಕಾಲಕ್ಕೆ ಮಾಡಿಕೊಡುವಲ್ಲಿ ಅಧಿಕಾರಿಗಳ ಶ್ರಮ ಶ್ಲಾಘನೀಯ ವಾಗಿದ್ದು ಅವರನ್ನು ನಾನೆಂದೂ ಅಗೌರವದಿಂದ ಕಾಣುವುದೇ ಇಲ್ಲ. ಸಣ್ಣ ಅಧಿಕಾರಿಯಾಗಲಿ ದೊಡ್ಡ ಅಧಿಕಾರಿ ಯಾಗಲಿ ಎಲ್ಲರೂ ಜನರ ಸೇವೆ ಮಾಡುವವರೇ ಆಗಿದ್ದಾರೆ ಅವರನ್ನೂ ಎಲ್ಲರೂ ಗೌರವಿಸುವಂತಾಗಬೇಕು ಎಂದು ಶಾಸಕರು ಹೇಳಿದರು.
ಕೋಡಿಂಬಾಡಿ ಮಹಿಷ ಮರ್ಧಿನಿ ದೇವಸ್ಥಾನದ ಬ್ರಹ್ಮಕಲಸೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು, ದೇವಸ್ಥಾನದ ಪ್ರಧಾನ ಅರ್ಚಕ ರಾಮಕೃಷ್ಣ ಭಟ್, ಕಾಂಗ್ರೆಸ್ ಮುಖಂಡ ಡಾ. ರಘು ಬೆಳ್ಳಿಪ್ಪಾಡಿ ಮಾತನಾಡಿದರು.
ವೇದಿಕೆಯಲ್ಲಿ ಕೋಡಿಂಬಾಡಿ ಗ್ರಾಪಂ ಸದಸ್ಯರಾದ ಮಲ್ಲಿಕಾ ಅಶೋಕ್ ಪೂಜಾರಿ, ಪೂರ್ಣಿಮಾ ಯತೀಶ್ ಶೆಟ್ಟಿ, ಗೀತಾ ಬಾಬು ಮೊಗೇರ, ವಿಶ್ವನಾಥ ಕೃಷ್ಣಗಿರಿ, ಕೋಡಿಂಬಾಡಿ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಶೇಖರ ಪೂಜಾರಿ ಜೇಡರ ಪಾಲು ಉಪಸ್ಥಿತರಿದ್ದರು.
ಸಂತೋಷ್ ರೈ ಕೆದಿಕಂಡೆಗುತ್ತು ಸ್ವಾಗತಿಸಿದರು. ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರ್ ವಂದಿಸಿದರು. ಜಗನ್ನಾಥ ಶೆಟ್ಟಿ ನಡುಮನೆ ಕಾರ್ಯಕ್ರಮ ನಿರ್ವಹಿಸಿದರು.







