ಕಾಲು ಕಳೆದುಕೊಂಡ ಪತಿಗೆ ಜೀವನಾಂಶ ನೀಡಲು ಪತ್ನಿಗೆ ನಿರ್ದೇಶಿಸಿದ್ದ ಆದೇಶ ರದ್ದು

ಬೆಂಗಳೂರು, ಜೂ.19: ಗ್ಯಾಂಗ್ರಿನ್‍ಯಿಂದ ಕಾಲು ಕಳೆದುಕೊಂಡು ಹಣ ಸಂಪಾದಿಸಲು ಆಗದ ಪತಿಗೆ ಮಾಸಿಕ 3 ಸಾವಿರ ರೂ.ಜೀವನಾಂಶ ನೀಡಲು ಪತ್ನಿಗೆ ನಿರ್ದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಕೌಟುಂಬಿಕ ಕೋರ್ಟ್ ಆದೇಶ ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ.
ಅಲ್ಲದೆ, ಪತಿ ತನ್ನನ್ನು ಪರಿತ್ಯಜಿಸಿದ್ದು, ಕಿರುಕುಳ ನೀಡುತ್ತಿರುವ ಹಿನ್ನೆಲೆಯಲ್ಲಿ ವಿಚ್ಛೇದನ ನೀಡಬೇಕೆಂಬ ಪತ್ನಿಯ ಮನವಿ ತಿರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯ ಆದೇಶವನ್ನು ಹೈಕೋರ್ಟ್ ಇದೇ ವೇಳೆ ಪುರಸ್ಕರಿಸಿದೆ.
ತುಮಕೂರಿನ ಜಯಮ್ಮ ಮತ್ತು ಚಿಕ್ಕಮಗಳೂರಿನ ಹರೀಶ್(ಹೆಸರು ಬದಲಿಸಲಾಗಿದೆ) 2000ರಲ್ಲಿ ವಿವಾಹವಾಗಿದ್ದರು. ಇವರಿಗೆ ಹೆಣ್ಣು ಮಗು ಜನಿಸಿತ್ತು. ಈ ಮಧ್ಯೆ ಪತ್ನಿಯನ್ನು ಮದುವೆಯ ಬಳಿಕ ಪತಿಯೇ ಬಿ.ಕಾಂ.ಪದವಿಗೆ ಸೇರಿಸಿದ್ದರು. ಆದರೆ, ಗ್ಯಾಂಗ್ರಿನ್ ಸಮಸ್ಯೆಯಿಂದ 2009ರಂದು ಪತಿಯ ಎಡಗಾಲನ್ನು ವೈದ್ಯರು ಕತ್ತರಿಸಿದ್ದರು.
ಇದಾದ ನಂತರ ಪತಿಯನ್ನು ಪತ್ನಿ ಪರಿತ್ಯಜಿಸಿದ್ದರು ಎಂಬ ಆರೋಪವಿದೆ. ಕೌಟುಂಬಿಕ ಕೋರ್ಟ್ ಮೊರೆ ಹೋಗಿದ್ದ ಹರೀಶ್, ಕಾಲು ಕತ್ತರಿಸಿರುವ ಕಾರಣ ತಾನು ಸಂಪಾದನೆ ಮಾಡುವ ಸ್ಥಿತಿಯಲ್ಲಿ ಇಲ್ಲ. ಪತ್ನಿ ಮಾಸಿಕ 25 ಸಾವಿರ ರೂ.ಸಂಪಾದಿಸುತ್ತಿದ್ದು, ತನಗೆ ಮಾಸಿಕ 10 ಸಾವಿರ ರೂ.ಜೀವನಾಂಶ ನೀಡಲು ನಿರ್ದೇಶಿಸುವಂತೆ ಕೋರಿದ್ದರು. ಪತಿಯ ಎಲ್ಲ ಆರೋಪಗಳನ್ನು ಪತ್ನಿ ಅಲ್ಲಗೆಳೆದಿದ್ದರು. ಕೌಟುಂಬಿಕ ಕೋರ್ಟ್, ಹರೀಶ್‍ಗೆ ಮಾಸಿಕ 3 ಸಾವಿರ ರೂ.ಜೀವನಾಂಶ ನೀಡುವಂತೆ ಪತ್ನಿಗೆ ನಿರ್ದೇಶಿಸಿತ್ತು.







