‘ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡ ಭಾರತ ಪ್ರವಾಸ ಕೈಗೊಳ್ಳಬಾರದು’

ಕರಾಚಿ: ಪಾಕಿಸ್ತಾನದ ಬ್ಯಾಟಿಂಗ್ ದಿಗ್ಗಜ ಜಾವೇದ್ ಮಿಯಾಂದಾದ್ ಭಾರತ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಬಿಸಿಸಿಐ ಮೊದಲು ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡಲು ಒಪ್ಪಿಗೆ ನೀಡದಿದ್ದರೆ ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಸಹಿತ ಎಲ್ಲ ಪಂದ್ಯಗಳಿಗೆ ಪಾಕಿಸ್ತಾನ ತಂಡ ಭಾರತಕ್ಕೆ ಭೇಟಿ ನೀಡಬಾರದು ಎಂದು ಸಲಹೆ ನೀಡಿದ್ದಾರೆ.
ಐಸಿಸಿಯ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಪಾಕಿಸ್ತಾನ ತಂಡ ಅಹಮದಾಬಾದ್‌ನಲ್ಲಿ ಅಕ್ಟೋಬರ್ 15ರಂದು ಬಹು ನಿರೀಕ್ಷಿತ ವಿಶ್ವಕಪ್ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ.
ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳುವ ಸರದಿ ಈಗ ಭಾರತಕ್ಕೆ ಬಂದಿದೆ ಎಂದಿರುವ 66ರ ಹರೆಯದ ಮಾಜಿ ನಾಯಕ, ಪಾಕಿಸ್ತಾನವು 2012 ಹಾಗೂ 2016ರಲ್ಲಿ ಭಾರತಕ್ಕೆ ಪ್ರವಾಸ ಕೈಗೊಂಡಿತ್ತು. ಇದೀಗ ಪಾಕ್‌ಗೆ ಬರುವ ಸರದಿ ಭಾರತದ್ದಾಗಿದೆ ಎಂದು ಹೇಳಿದರು.
ನಾವು ಅವರೊಂದಿಗೆ ಯಾವಾಗಲೂ ಆಡಲು ಸಿದ್ಧರಿದ್ದೇವೆ. ಆದರೆ ಅವರು ಎಂದಿಗೂ ನಮ್ಮೊಂದಿಗೆ ಆಡಲು ಮುಂದಾಗುವುದಿಲ್ಲ. ಪಾಕಿಸ್ತಾನ ಕ್ರಿಕೆಟ್ ಬೆಳೆದಿದೆ. ನಾವು ಈಗಲೂ ಗುಣಮಟ್ಟದ ಆಟಗಾರರನ್ನು ಸೃಷ್ಟಿಸುತ್ತಿದ್ದೇವೆ. ಹಾಗಾಗಿ ನಾವು ಭಾರತಕ್ಕೆ ಹೋಗದಿದ್ದರೂ ಅದು ನಮಗೆ ಯಾವುದೇ ವ್ಯತ್ಯಾಸವನ್ನುಂಟು ಮಾಡುತ್ತದೆ ಎಂದು ನಾನು ಭಾವಿಸುವುದಿಲ್ಲ. ಕ್ರೀಡೆಯನ್ನು ರಾಜಕೀಯದೊಂದಿಗೆ ಬೆರೆಸಬಾರದು ಎಂದು ಮಿಯಾಂದಾದ್ ಅಭಿಪ್ರಾಯಪಟ್ಟರು.
ಭಾರತವು 2008ರಲ್ಲಿ 50 ಓವರ್‌ಗಳ ಏಶ್ಯಕಪ್ ಟೂರ್ನಿಯನ್ನಾಡಲು ಪಾಕಿಸ್ತಾನಕ್ಕೆ ಕೊನೆಯ ಬಾರಿ ಭೇಟಿ ನೀಡಿತ್ತು. ಅಂದಿನಿಂದ ಉಭಯ ರಾಷ್ಟ್ರಗಳ ದೀರ್ಘಕಾಲದ ಭೌಗೋಳಿಕ-ರಾಜಕೀಯ ಉದ್ವಿಗ್ನತೆಯಿಂದಾಗಿ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧವನ್ನು ಸ್ಥಗಿತಗೊಳಿಸಲಾಯಿತು. ಪಾಕಿಸ್ತಾನವು ಮುಂಬರುವ ಏಶ್ಯಕಪ್‌ನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಬೇಕಾದ ಅನಿವಾರ್ಯ ಪರಿಸ್ಥಿತಿಗೆ ಸಿಲುಕಿದೆ. ಹೈಬ್ರಿಡ್ ಮಾದರಿಯಪ್ರಕಾರ ಭಾರತವು ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಮಿಯಾಂದಾದ್ ಭಾರತವನ್ನು ಟೀಕಿಸಿದ್ದಾರೆ.