ನೇಶನ್ಸ್ ಲೀಗ್ ಪ್ರಶಸ್ತಿ ಗೆದ್ದ ಸ್ಪೇನ್
ಪೆನಾಲ್ಟಿ ಶೂಟೌಟ್‌ನಲ್ಲಿ ಕ್ರೊಯೇಶಿಯಾ ಔಟ್
ರೋಟರ್‌ಡಮ್(ನೆದರ್‌ಲ್ಯಾಂಡ್ಸ್): ಪೆನಾಲ್ಟಿ ಶೂಟೌಟ್‌ನಲ್ಲಿ ಕ್ರೊಯೇಶಿಯ ತಂಡವನ್ನು 5-4 ಅಂತರದಿಂದ ಮಣಿಸಿದ ಸ್ಪೇನ್ ತಂಡ ಯುಇಎಫ್‌ಎ ನೇಶನ್ಸ್ ಲೀಗ್ ಕಪ್‌ನ್ನು ಎತ್ತಿ ಹಿಡಿಯಿತು. ಇದರೊಂದಿಗೆ 11 ವರ್ಷಗಳ ಟ್ರೋಫಿಯ ಬರವನ್ನು ನೀಗಿಸಿಕೊಂಡಿತು.
ರವಿವಾರ ನಡೆದ ಫೈನಲ್ ಹಣಾಹಣಿಯಲ್ಲಿ ಹೆಚ್ಚುವರಿ ಸಮಯದ ನಂತರವೂ ಪಂದ್ಯವು ಗೋಲುರಹಿತ ಡ್ರಾನಲ್ಲಿ ಕೊನೆಗೊಂಡಾಗ ಫಲಿತಾಂಶವನ್ನು ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಡ್ಯಾನಿ ಕರ್ವಾಜಲ್ ಶೂಟೌಟ್‌ನಲ್ಲಿ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿ ಸ್ಪೇನ್‌ಗೆ ರೋಚಕ ಗೆಲುವು ದೃಢಪಡಿಸಿದರು. ಕ್ರೊಯೇಶಿಯ ತಂಡದ ಸೋಲಿನೊಂದಿಗೆ ಹಿರಿಯ ನಾಯಕ ಲುಕಾ ಮೊಡ್ರಿಕ್ ತನ್ನ ಮೊದಲ ಅಂತರ್‌ರಾಷ್ಟ್ರೀಯ ಪ್ರಶಸ್ತಿಗಾಗಿ ಇನ್ನಷ್ಟು ಕಾಯ ಬೇಕಾಗಿದೆ.
ಸ್ಪೇನ್ ಗೋಲ್‌ಕೀಪರ್ ಉನೈ ಸೈಮನ್ ಎದುರಾಳಿ ತಂಡಕ್ಕೆ ಎರಡು ಬಾರಿ ಗೋಲು ನಿರಾಕರಿಸಿ ದರು. ಕರ್ವಾಜಲ್ ಸ್ಪೇನ್ ತಂಡ 2012ರ ಯುರೋ ಕಪ್ ನಂತರ ಮೊದಲ ಟ್ರೋಫಿ ಜಯಿಸುವಲ್ಲಿ ನೆರವಾದರು. ಕ್ರೊಯೇಶಿಯದ ಟ್ರೋಫಿ ಕನಸನ್ನು ಭಗ್ನಗೊಳಿಸಿದರು. ಸ್ಪೇನ್ 2010ರಲ್ಲಿ ವಿಶ್ವಕಪ್‌ನ್ನು ಜಯಿಸಿತ್ತು. 1964, 2008 ಹಾಗೂ 2012ರಲ್ಲಿ ಯುರೋಪಿ ಯನ್ ಚಾಂಪಿಯನ್‌ಶಿಪ್ ಗೆದ್ದುಕೊಂಡಿತ್ತು.
ಮಿಡ್‌ಫೀಲ್ಡರ್ ರೊಡ್ರಿ ತನ್ನ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದ ನಂತರ ಮೇಲಕ್ಕೆ ಹಾರಿ ಖುಷಿಪಟ್ಟರು. ತನ್ನ ಕ್ಲಬ್ ಮ್ಯಾಂಚೆಸ್ಟರ್ ಸಿಟಿ ಪರ ತ್ರಿವಳಿ ಪ್ರಶಸ್ತಿ ಗೆದ್ದ ನಂತರ ಈ ಋತುವಿನಲ್ಲಿ 4ನೇ ಪ್ರಶಸ್ತಿಗೆ ಮುತ್ತಿಟ್ಟರು. ನೇಶನ್ಸ್ ಲೀಗ್ ಟೂರ್ನಿಯ ಆಟಗಾರನಾಗಿ ಆಯ್ಕೆಯಾದ ರೊಡ್ರಿ ಈ ವರ್ಷವನ್ನು ಸ್ಮರಣೀಯವಾಗಿಸಿ ಕೊಂಡರು. 2018ರ ವಿಶ್ವಕಪ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದ ಕ್ರೊಯೇಶಿಯ ಕಳೆದ ವರ್ಷ ಖತರ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ 3ನೇ ಸ್ಥಾನ ಪಡೆದಿತ್ತು. ರಿಯಲ್ ಮ್ಯಾಡ್ರಿಡ್ ಪರ ಐದು ಬಾರಿ ಚಾಂಪಿಯನ್ಸ್ ಲೀಗ್ ಜಯಿಸಿದ್ದ ಮೊಡ್ರಿಕ್ 2018ರಲ್ಲಿ ಫಿಫಾ ವರ್ಷದ ಆಟಗಾರ ಪ್ರಶಸ್ತಿ ಜಯಿಸಿ ಲಿಯೊನೆಲ್ ಮೆಸ್ಸಿ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊರ ದಶಕಗಳ ಪ್ರಶಸ್ತಿ ಮೇಲಿನ ಪ್ರಾಬಲ್ಯ ಮುರಿದಿದ್ದರು.
ಆದರೆ ಅವರು ವೃತ್ತಿಬದುಕಿನಲ್ಲಿ ಅಂತರ್‌ರಾಷ್ಟ್ರೀಯ ಗೌರವ ವನ್ನು ಈ ತನಕ ಪಡೆಯಲು ಸಾಧ್ಯವಾಗಲಿಲ್ಲ. ಮುಂದಿನ ವರ್ಷದ ಯುರೋ ಚಾಂಪಿಯನ್‌ಶಿಪ್‌ನಲ್ಲಿ ಮೊಡ್ರಿಕ್ ಮತ್ತೊಮ್ಮೆ ಪ್ರಶಸ್ತಿಗಾಗಿ ಪ್ರಯತ್ನಿಸಬಹುದು. 2021ರ ನೇಶನ್ಸ್ ಲೀಗ್ ಫೈನಲ್‌ನಲ್ಲಿ ಫ್ರಾನ್ಸ್‌ಗೆ ಸೋತಿದ್ದ ಸ್ಪೇನ್ ಈ ಬಾರಿ ಉತ್ತಮ ಪ್ರದರ್ಶನ ನೀಡಿತು.







