ಆರೋಪ ಮುಕ್ತಿ ಕೋರಿ ಮಾಜಿ ಡಿಜಿಪಿ ಶ್ರೀಕುಮಾರ ಸಲ್ಲಿಸಿದ್ದ ಅರ್ಜಿಗೆ ನ್ಯಾಯಾಲಯದ ತಿರಸ್ಕಾರ
ಗುಜರಾತ್ ಗಲಭೆ ಸುಳ್ಳುಸಾಕ್ಷ ಪ್ರಕರಣ

ಅಹ್ಮದಾಬಾದ್: 2002ರ ಗುಜರಾತ್ ಗಲಭೆಗಳ ಹಿಂದೆ ಸಂಚೊಂದರ ಸುಳ್ಳುಸಾಕ್ಷವನ್ನು ಸೃಷ್ಟಿಸಿದ್ದಕ್ಕಾಗಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣದಿಂದ ತನ್ನನ್ನು ಖುಲಾಸೆಗೊಳಿಸುವಂತೆ ಕೋರಿ ಮಾಜಿ ಡಿಜಿಪಿ ಶ್ರೀಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಅಹ್ಮದಾಬಾದ್‌ನ ಸೆಷನ್ಸ್ ನ್ಯಾಯಾಲಯವು ಸೋಮವಾರ ತಿರಸ್ಕರಿಸಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರನ್ನು ಗುಜರಾತ್ ಗಲಭೆ ಪ್ರಕರಣದಲ್ಲಿ ಸಿಲುಕಿಸುವುದು ಶ್ರೀಕುಮಾರ ಉದ್ದೇಶವಾಗಿತ್ತು ಎಂದು ಆರೋಪಿಸಲಾಗಿದೆ.
ತನ್ನ ವಿರುದ್ಧ ಸುಳ್ಳು ಆರೋಪವನ್ನು ಹೊರಿಸಲಾಗಿದೆ ಮತ್ತು ವಿಶೇಷ ತನಿಖಾ ತಂಡದ ಪ್ರಕರಣ ಮುಕ್ತಾಯ ವರದಿಯ ವಿರುದ್ಧ ಝಕಿಯಾ ಝಾಫ್ರಿಯವರು ಸಲ್ಲಿಸಿದ್ದ ಮೇಲ್ಮನವಿಗೂ ತನಗೂ ಸಂಬಂಧವಿಲ್ಲ. ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಯಾರನ್ನೂ ಹೆಸರಿಸಿರದಿದ್ದರೂ ತನ್ನ ಮತ್ತು ಇತರರ ವಿರುದ್ಧ ತರಾತುರಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಶ್ರೀಕುಮಾರ್ ಅರ್ಜಿಯಲ್ಲಿ ವಾದಿಸಿದ್ದರು.
ಪ್ರಾಸಿಕ್ಯೂಷನ್ ಸಲ್ಲಿಸಿರುವ ಸಾಕ್ಷಗಳು ಪ್ರಾಥಮಿಕವಾಗಿ ಅರ್ಜಿದಾರರ ವಿರುದ್ಧದ ಪ್ರಕರಣವನ್ನು ಸಮರ್ಥಿಸುತ್ತಿವೆ. ಅರ್ಜಿದಾರರ ವಿರುದ್ಧ ವಿಚಾರಣೆಯನ್ನು ನಡೆಸಲು ಸಾಕಷ್ಟು ಪುರಾವೆಗಳಿವೆ. ಅರ್ಜಿದಾರರು ಮತ್ತು ಇನ್ನೋರ್ವ ವ್ಯಕ್ತಿಯ ನಡುವಿನ ಸಂಭಾಷಣೆಯ ಆಡಿಯೊ ಟೇಪ್‌ನ್ನು ಪ್ರಾಸಿಕ್ಯೂಷನ್ ಸಲ್ಲಿಸಿದೆ ಮತ್ತು ಅದರಲ್ಲಿಯ ಧ್ವನಿಯನ್ನು ವಿಧಿವಿಜ್ಞಾನ ಪ್ರಯೋಗಾಲಯವು ದೃಢಪಡಿಸಿದೆ. ಇದು ಅರ್ಜಿಯನ್ನು ತಿರಸ್ಕರಿಸಲು ನ್ಯಾಯಾಲಯಕ್ಕೆ ಸಕಾರಣವನ್ನು ನೀಡಿದೆ ಎಂದು ಸೆಷನ್ಸ್ ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.
ಝಕಿಯಾ ಝಾಫ್ರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದ ಮರುದಿನ,2022 ಜೂ.25ರಂದು ಕ್ರೈಂ ಬ್ರಾಂಚ್ ಪೊಲೀಸರು ಕ್ರಿಮಿನಲ್ ಒಳಸಂಚು, ಫೋರ್ಜರಿ, ಸುಳ್ಳುಸಾಕ್ಷ ಸೃಷ್ಟಿ ಇತ್ಯಾದಿ ಆರೋಪಗಳಡಿ ಶ್ರೀಕುಮಾರ್,ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟ್ ಲ್ವಾ ಡ್ ಮತ್ತು ಇನ್ನೋರ್ವ ಮಾಜಿ ಐಪಿಎಸ್ ಅಧಿಕಾರಿ ಸಂಜೀವ ಭಟ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದರು.







